ನವದೆಹಲಿ: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡ್ಡಾಯ ರಜೆಯ ಮೇಲೆ ತೆರಳಿರುವ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಆಸ್ಥಾನ ವಿರುದ್ಧದ ಎಫ್ಐಆರ್ ರದ್ದುಗೊಳಿಸಲು ಸಿಬಿಐ ತೀವ್ರ ವಿರೋಧ ವ್ಯಕ್ತಪಡಿಸಿದೆ.
ರಾಕೇಶ್ ಆಸ್ಥಾನ ಅವರು ತಮ್ಮ ವಿರುದ್ಧದ ಎಫ್ಐಆರ್ ರದ್ದು ಕೋರಿ ದೆಹಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಕೋರ್ಟ್ ಈ ಬಗ್ಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸಿಬಿಐಗೆ ಸೂಚಿಸಿತ್ತು.
ಆಸ್ಥಾನ ಹಾಗೂ ಇತರರ ವಿರುದ್ಧದ ತನಿಖೆ ಪ್ರಾಥಮಿಕ ಹಂತದಲ್ಲಿದ್ದು, ಈ ಹಂತದಲ್ಲಿ ಎಫ್ಐಆರ್ ರದ್ದತಿಗೆ ಅವಕಾಶ ನೀಡಬಾರದು. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಕಾನೂನು ಬಾಹಿರ ದಾಖಲೆಗಳು ಪತ್ತೆಯಾಗಿವೆ ಮತ್ತು ಅವರ ಪಾತ್ರದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಸಿಬಿಐ ಇಂದು ಕೋರ್ಟ್ ತಿಳಿಸಿದೆ.
ಮೂರು ಕೋಟಿ ರುಪಾಯಿ ಲಂಚ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನ್ನ ವಿಶೇಷ ನಿರ್ದೇಶಕ ರಾಕೇಶ್ ಆಸ್ಥಾನಾ ಅವರ ವಿರುದ್ಧವೇ ಎಫ್ಐಆರ್ ದಾಖಲಿಸಿತ್ತು. ರಾಕೇಶ್ ಆಸ್ಥಾನಾ ಅವರು ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ತನ್ನನ್ನು ಬಂಧಿಸದಂತೆ ಮತ್ತು ತಮ್ಮ ವಿರುದ್ಧದ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು.