ದೇಶ

#MeToo: ಪಲ್ಲವಿ ಜತೆ ಸಹಮತದ ಸಂಬಂಧ ಇತ್ತು - ಅತ್ಯಾಚಾರ ಆರೋಪ ತಳ್ಳಿಹಾಕಿದ ಎಂ.ಜೆ.ಅಕ್ಬರ್

Lingaraj Badiger
ನವದೆಹಲಿ: ತಮ್ಮ ವಿರುದ್ಧದ ಅತ್ಯಾಚಾರ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಮಾಜಿ ಕೇಂದ್ರ ಸಚಿವ ಎಂ.ಜೆ.ಅಕ್ಬರ್ ಅವರು ಅಮೆರಿಕದಲ್ಲಿರುವ ಭಾರತೀಯ ಮೂಲದ ಪತ್ರಕರ್ತೆ ಪಲ್ಲವಿ ಗೊಗೊಯ್ ಜತೆ ಸಹಮತದ ಸಂಬಂಧ ಇತ್ತು ಎಂದು ಶುಕ್ರವಾರ ಹೇಳಿದ್ದಾರೆ.
ಪಲ್ಲವಿ ಜತೆ ಸಹಮತದ ಸಂಬಂಧ ಇತ್ತು. ನಾವಿಬ್ಬರು ಕೆಲವು ತಿಂಗಳ ಕಾಲ ಜೊತೆಗಿದ್ದೇವು. ಇದು ನನ್ನ ಸಂಸಾರಿಕ ಜೀವನದಲ್ಲಿ ಭಾರಿ ಕೋಲಾಹಲ ಎಬ್ಬಿಸಿತ್ತು ಎಂದು ಅಕ್ಬರ್ ಸ್ಪಷ್ಟನೆ ನೀಡಿದ್ದಾರೆ.
ನನ್ನ ಮತ್ತು ಪಲ್ಲವಿ ಗೊಗೋಯ್‌ ನಡುವೆ ಹಲವು ತಿಂಗಳ ಕಾಲ ಪರಸ್ಪರ ಸಮ್ಮತಿಯ ಲೈಂಗಿಕ ಸಂಬಂಧ ಇತ್ತು. ಆದರೆ ಅದು ಕೆಲವೇ ತಿಂಗಳಲ್ಲಿ ಕೊನೆಗೊಂಡಿತ್ತು. ಬಹುಷಃ ಅದಕ್ಕೆ ಅಷ್ಟೇನೂ ಒಳ್ಳೆಯ ಕಾರಣಗಳಿರಲಿಲ್ಲ ಎಂದು ಅಕ್ಬರ್ ಹೇಳಿದ್ದಾರೆ.
ಇನ್ನು ಅಕ್ಬರ್ ಅವರ ಪತ್ನಿ ಮಲ್ಲಿಕಾ ಜೋಸೆಫ್ ಅವರು ತಮ್ಮ ಪತಿ ವಿರುದ್ಧದ ಲೈಂಗಿಕ ದೌರ್ಜನ್ಯದ ಆರೋಪಗಳ ಬಗ್ಗೆ ಮೌನ ಮುರಿದಿದ್ದು, ಪಲ್ಲವಿ ಗೊಗೊಯ್ ಅವರು ನನ್ನ ಪತಿ ಜತೆ ಸಹಮತದ ಸಂಬಂಧ ಹೊಂದಿದ್ದರು ಎಂದು ಹೇಳಿದ್ದಾರೆ.
ಪಲ್ಲವಿ 20 ವರ್ಷಗಳ ಹಿಂದೆ ನಮ್ಮ ಮನೆಯ ನೆಮ್ಮದಿ ಹಾಳು ಮಾಡಿದ್ದರು. ನನ್ನ ಕಣ್ಣಮುಂದೆಯೇ ಅವರಿಬ್ಬರು ಪಾರ್ಟಿಗಳಲ್ಲಿ ಡ್ಯಾನ್ಸ್ ಮಾಡುತ್ತಿದ್ದರು. ಇದರಿಂದ ನನಗೆ ತುಂಬಾ ನೋವಾಗಿತ್ತು. ಪಲ್ಲವಿ ಜೊತೆಗಿನ ಸಂಬಂಧಕ್ಕೆ ನಾನು ತೀವ್ರ ವಿರೋಧ ವ್ಯಕ್ತಪಡಿಸಿದ್ದೆ. ನನ್ನ ವಿರೋಧಕ್ಕೆ ಮಣಿದು ಅವರು ಆಕೆಯೊಂದಿಗಿನ ಸಂಬಂಧ ಕಡಿದುಕೊಂಡಿದ್ದರು. ಆದರ ಈಗ ಏಕೆ ಸುಳ್ಳು ಅತ್ಯಾಚಾರ ಆರೋಪ ಮಾಡುತ್ತಿದ್ದಾರೆ ಗೊತ್ತಿಲ್ಲ ಎಂದಿದ್ದಾರೆ.
ಆಕೆ ಸಂತೋಷವಾಗಿಯೇ ನನ್ನ ಪತಿ ಜತೆ ಕುಡಿಯುತ್ತಿದ್ದಳು. ನಮ್ಮೊಂದಿಗೆ ಊಟ ಮಾಡುತ್ತಿದ್ದಳು. ಹೀಗಾಗಿ ಪಲ್ಲವಿ ಅತ್ಯಾಚಾರ ಸಂತ್ರಸ್ಥೆ ಅಂತ ನನಗೆ ಅನಿಸುತ್ತಿಲ್ಲ. ಅದು ಸುಳ್ಳು ಆರೋಪ ಎಂದು ಮಲ್ಲಿಕಾ ಎಎನ್ಐಗೆ ತಿಳಿಸಿದ್ದಾರೆ.
SCROLL FOR NEXT