ಚಿಕಿತ್ಸೆಗೆ ರಜೆ ಸಿಗದೆ ಅನಾರೋಗ್ಯ ಪೀಡಿತ ಮಹಿಳಾ ಪೇದೆ ಸಾವು: ಉದ್ರಿಕ್ತ ಪೊಲೀಸರಿಂದ ಅಧಿಕಾರಿ ವಿರುದ್ಧ ಪ್ರತಿಭಟನೆ
ಪಾಟ್ನ: ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಮಹಿಳಾ ಪೇದೆಯೊಬ್ಬರು ಚಿಕಿತ್ಸೆ ಪಡೆದುಕೊಳ್ಳಲು ರಜೆ ಸಿಗದ ಕಾರಣ ಮೃತಪಟ್ಟಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ಅಧಿಕಾರಿಯ ನಿರ್ಲಕ್ಷ್ಯ ಹಾಗೂ ಅಮಾನವೀಯತೆಯಿಂದಾಗಿ ಮಹಿಳಾ ಪೇದೆ ಮೃತಪಟ್ಟಿದ್ದಾರೆಂದು ಆರೋಪಿಸಿ 300ಕ್ಕೂ ಹೆಚ್ಚು ಪೊಲೀಸರು ಇದೀಗ ಅಧಿಕಾರಿ ವಿರುದ್ಧ ಉಗ್ರ ಪ್ರತಿಭಟನೆ ನಡೆಸುತ್ತಿದ್ದಾರೆ.
ಕರ್ತವ್ಯದ ಹೆಸರಿನಲ್ಲಿ ನಮ್ಮ ಮೇಲೆ ದೌರ್ಜನ್ಯವೆಸಗಲಾಗುತ್ತಿದೆ. ಸಾಮಾನ್ಯ ವ್ಯವಸ್ಥೆ ಹಾಗೂ ಸೌಲಭ್ಯಗಳನ್ನೂ ನೀಡದೆ ನಮ್ಮ ದೌರ್ಜನ್ಯ ಎಸಗುತ್ತಿದ್ದಾರೆ. ಆಹಾರ, ನೀರು ಹಾಗೂ ಶೌಚಾಲಯವಿಲ್ಲದಿದ್ದರೂ ನಾವು ಕರ್ತವ್ಯ ನಿರ್ವಹಿಸುತ್ತೇವೆ. ಆದರೆ, ನಿಜ ಕಾರಣಗಳನ್ನು ಹೇಳಿದರೂ ನಮಗೆ ರಜೆ ಸಿಗುವುದಿಲ್ಲ ಎಂದು ಪ್ರತಿಭಟನಾನಿರತ ಪೊಲೀಸರು ಹೇಳಿದ್ದಾರೆ.
ಮೃತಪಟ್ಟಿರುವ ಮಹಿಳಾ ಪೇದೆಯನ್ನು ಕಾರ್ಗಿಲ್ ಚೌಕದಲ್ಲಿ ಕೆಲ ದಿನಗಳ ಕಾಲ ನಿಯೋಜಿಸಲಾಗಿತ್ತು. ಆಗಲೇ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಚಿತಿತ್ಸೆಗಾಗಿ ರಜೆ ಪಡೆಯಲು ಯತ್ನಿಸಿದಾಗ ಕೇವಲ 3 ದಿನ ಮಾತ್ರ ರಜೆ ದೊರಕಿತ್ತು. ಈ ಅಲ್ಪ ರಜೆ ಸಮಯದಲ್ಲಿಯೇ ಸರಿಯಾಗಿ ಚಿಕಿತ್ಸೆ ಪಡೆಯಲು ಸಾಧ್ಯವಾಗಿದೆ ಮೃತಪಟ್ಟಿದ್ದಾರೆಂದು ಸಹೋದ್ಯೋಗಿಯೊಬ್ಬರು ಆರೋಪಿಸಿದ್ದಾರೆ.
ಪೇದೆ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದರು. ಹಲವು ದಿನಗಳಿಂದಲೂ ರಜೆಗೆ ಅನುಮತಿ ಕೋರಿದ್ದರೂ, ಅನುಮತಿ ದೊರಕಿರಲಿಲ್ಲ ಎಂದಿದ್ದಾರೆ.
ಘಟನೆಗೆ ಹಲವು ಪೊಲೀಸರು ಇದೀಗ ಆಕ್ರೋಶ ವ್ಯಕ್ತಪಡಿಸಿದ್ದು, ಅಧಿಕಾರಿಯ ಕಚೇರಿ ಬಳಿ ಉಗ್ರ ಪ್ರತಿಭಟನೆ ನಡೆಸುತ್ತಿದ್ದಾರೆ.