ದೇಶ

ಉತ್ತರ ಪ್ರದೇಶ: ವ್ಯಕ್ತಿ ಮೇಲೆ ದಾಳಿಗೈದ ಹುಲಿಯನ್ನು ಟ್ರ್ಯಾಕ್ಟರ್ ಹರಿಸಿ ಕೊಂದ ಗ್ರಾಮಸ್ಥರು!

Raghavendra Adiga
ಲಖನೌ: ಓರ್ವ ವ್ಯಕ್ತಿಯ ಮೇಲೆ ದಾಳಿ ನಡೆಸಿದೆ ಎನ್ನುವ ಕಾರಣಕ್ಕೆ ಗ್ರಾಮಸ್ಥರು ಸೇರಿ ಹುಲಿಯ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಅಮಾನುಷವಾಗಿ ಕೊಂದು ಹಾಕಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯ ದುಧ್ವಾ ಹುಲಿ ಅಭಯಾರಣ್ಯ ಪ್ರದೇಶದಲ್ಲಿ ನಡೆದಿರುವ ಘಟನೆಯಲ್ಲಿ ಹುಲಿಯೊಂದು ವ್ಯಕ್ತಿಯ ಮೇಲೆ ದಾಳಿ ಮಾಡಿದೆ. ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಭಾನುವಾರದಂದು ಆ ಹುಲಿಯನ್ನು ಅಟ್ಟಾಡಿಸಿ ಹೊಡೆದು ಕೊಂದಿದ್ದಾರೆ. ಹುಲಿ ಸಂರಕ್ಷಿತ ಅರಣ್ಯಕ್ಕೆ ನುಗ್ಗಿದ ಗ್ರಾಮಸ್ಥರು ಕಣ್ಣಿಗೆ ಬಿದ್ದ ಹೆಣ್ಣು ಹುಲಿಯ ಮೇಲೆ ಟ್ರ್ಯಾಕ್ಟರ್ ಹತ್ತಿಸಿದ್ದಾರೆ. ಇದರಿಂದ ಗಾಯಗೊಂಡಿದ್ದ ಹುಲಿಗೆ ಕೋಲು, ಆಯುಧಗಳಿಂದ ಹೊಡೆದು ಕೊಂದು ಹಾಕಿದ್ದಾರೆ.
ಇದಕ್ಕೆ ಮುನ್ನ ಕಳೆದ ರಾತ್ರಿ ಅರಣ್ಯ ಪ್ರದೇಶದ ಮಾರ್ಗವಾಗಿ ಗ್ರಾಮಕ್ಕೆ ಮರಳುತ್ತಿದ್ದ ವ್ಯಕ್ತಿ ಮೇಲೆ ಹುಲಿ ದಾಳಿ ಮಾಡಿತ್ತು.
ಹುಲಿ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಅದರ ಸಾವಿಗೆ ಕಾರಣರಾದವರ ಮೇಲೆ ಎಫ್ ಐಆರ್ ದಾಖಲಿಸಲಿದ್ದೇವೆ ಎಂದು ದುದ್ವಾ ನ್ಯಾಶನಲ್ ಪಾರ್ಕ್ ನ ನಿರ್ದೇಶಕ ಮಾಹಾವಿರ್ ಕೋಜಿಲಾಂಗಿ ಹೇಳಿದ್ದಾರೆ.
ಕಳೆದ ಹತ್ತು ವರ್ಷಗಳಿಗೆ ಹೆಚ್ಚು ಕಾಲದಿಂದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಗ್ರಾಮಸ್ಥರು ವಾಸಿಸುತ್ತಿದ್ದಾರೆ.ಆದರೆ ಇದುವರೆಗೆ ಯಾವೊಬ್ಬ ವ್ಯಕ್ತಿಯ ಮೇಲೆ ಸಹ ಹುಲಿ ದಾಳೀ ನಡೆಸಿಲ್ಲ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.
ಕಳೆದ ಕೆಲ ದಿನಗಳಿಂದಲೂ ಹುಲಿಯು ಗ್ರಾಮದ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದು ನಾವು ಹಲವು ಬಾರಿ ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದೆವು ಎಂದು ಗ್ರಾಮಸ್ಥರು ಹೇಳಿದ್ದಾರೆ.
ಇತ್ತೀಚೆಗೆ ನರಭಕ್ಷಕ ಹೆಣ್ಣು ಹುಲಿ ಅವನಿಯನ್ನು ಮಹಾರಾಷ್ಟ್ರದಲ್ಲಿ ಹತ್ಯೆಗೈದಿರುವುದು ರಾಷ್ಟ್ರಾದ್ಯಂತ ಭಾರೀ ಸುದ್ದಿಯಾಗಿತ್ತು.
SCROLL FOR NEXT