ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ
ಕಂಕೆರ್: ಭ್ರಷ್ಟಾಚಾರದ ವಿರುದ್ದ ಹೋರಾಡುತ್ತೇನೆಂದು ಹೇಳುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಛತ್ತೀಸ್ಗಢಕ್ಕೆ ಬಂದಾಗ ಇಲ್ಲಿನ ಮುಖ್ಯಮಂತ್ರಿಯನ್ನು ಭ್ರಷ್ಟರೆಂದು ಹೇಳುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಶನಿವಾರ ಹೇಳಿದ್ದಾರೆ.
ಛತ್ತೀಸ್ಗಢದ ಕಂಕೆರ್ ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿರುವ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತೇನೆಂದು ಹೇಳುತ್ತಾರೆ, ಆದರೆ, ಛತ್ತೀಸ್ಗಢ ರಾಜ್ಯಕ್ಕೆ ಬಂದಾಗ ಇಲ್ಲಿನ ಮುಖ್ಯಮಂತ್ರಿಗಳನ್ನು ಭ್ರಷ್ಟನೆಂದು ಹೇಳುವುದಿಲ್ಲ. ಚಿಟ್ ಫಂಡ್ ಹಗರಣದಲ್ಲಿ ನಿಮ್ಮ ರೂ.5000 ಕೋಟಿ ಹಣ ಮಾಯವಾಗಿದೆ. ಪ್ರಕರಣ ಸಂಬಂಧ ಈವರೆಗೂ 310 ಎಫ್ಐಆರ್ ಗಳು ದಾಖಲಾಗಿವೆ. ಆದರೆ, ಇಲ್ಲಿಯವರೆಗೂ ಯಾರೊಬ್ಬರ ವಿರುದ್ಧ ಕ್ರಮಕೈಗೊಳ್ಳಲಾಗಿಲ್ಲ. ಕಾರಣ ಹಗರಣದಲ್ಲಿ ಇಲ್ಲಿನ ಮುಖ್ಯಮಂತ್ರಿಗಳು ಭಾಗಿಯಾಗಿದ್ದಾರೆಂದು ಹೇಳಿದ್ದಾರೆ.
ಪಿಡಿಎಸ್ ಹಗರಣದಲ್ಲಿ ಛತ್ತೀಸ್ಗಢ ರಾಜ್ಯ ಜನತೆಯ ರೂ.36,000 ಕೋಟಿಯನ್ನು ಲೂಟಿ ಮಾಡಲಾಗಿದೆ. ಹಗರಣ ಸಂಬಂಧ ಡೈರಿಯೊಂದು ದೊರಕಿತ್ತು. ಡೈರಿಯಲ್ಲಿ ಮುಖ್ಯಮಂತ್ರಿ ಮೇಡಂ'ಗೆ ಹಣ ನೀಡಲಾಗಿದೆ ಎಂದು ಬರೆಯಲಾಗಿದೆ. ಡಾ.ಸಾಬ್'ಗೆ ಹಣ ನೀಡಲಾಗಿದೆ ಎಂದು ಬರೆಯಲಾಗಿದೆ. ಸಿಎಂ ಮೇಡಂ, ಡಾ.ಸಾಬ್ ಯಾರು ಎಂಬುದನ್ನು ರಮಣ್ ಸಿಂಗ್ ಅವರನ್ನು ಕೇಳುತ್ತಿದ್ದೇನೆ. ಡೈರಿಯಲ್ಲಿ ಬರೆದಿರುವ ಹೆಸರುಗಳು ಹಗರಣದಲ್ಲಿ ಸಂಬಂಧವನ್ನು ಹೊಂದಿವೆ.
ನನ್ನ ಪ್ರಶ್ನೆಗೆ ಮುಖ್ಯಮಂತ್ರಿಗಳು ಉತ್ತರ ನೀಡಲು ಇಚ್ಛಿಸದಿದ್ದರೆ, ಹಗರಣ ಸಂಬಂಧ ಪನಾಮಾ ಪೇಪರ್ಸ್ ನಲ್ಲಿಯೂ ಕೇಳಿ ಬಂದಿದ್ದ ತಮ್ಮ ಪುತ್ರನ ವಿರುದ್ಧ ಈವರೆಗೂ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲವೇಕೆ ಎಂಬುದಕ್ಕೆ ಛತ್ತೀಸ್ಗಢ ಜನತೆಗೆ ಉತ್ತರಿಸಬೇಕು. ಪನಾಮಾ ಪೇಪರ್ಸ್ ನಲ್ಲಿ ಪಾಕಿಸ್ತಾನ ಪ್ರಧಾನಮಂತ್ರಿಗಳ ಹೆಸರು ಕೇಳಿ ಬಂದಿದ್ದಕ್ಕೆ ಅವರನ್ನು ಜೈಲಿಗೆ ಕಳುಹಿಸಲಾಗಿತ್ತು ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics