ದೇಶ

ರಾಫೆಲ್ ವಿವಾದ: ಕೇಂದ್ರ ಸರ್ಕಾರದ ತಲೆನೋವಿಗೆ ಕಾರಣವಾದ ಪ್ರಶಾಂತ್ ಭೂಷಣ್ ಪ್ರಶ್ನೆಗಳು?

Srinivasamurthy VN
ನವದೆಹಲಿ: ರಾಫೆಲ್ ಜೆಟ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ಖ್ಯಾತ ವಕೀಲ ಹಾಗೂ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಭೂಷಣ್ ಅವರು ಸರ್ಕಾರದ ಮುಂದೆ ಹಲವು ಪ್ರಶ್ನೆಗಳನ್ನಿಡುವ ಮೂಲಕ ತಲೆನೋವಿಗೆ ಕಾರಣರಾಗಿದ್ದಾರೆ.
ಕಾಂಗ್ರೆಸ್, ವಿಪಕ್ಷಗಳು ಹಾಗೂ ಕೇಂದ್ರಸರ್ಕಾರದ ನಡುವಿನ ತಿಕ್ಕಾಟಕ್ಕೆ ಕಾರಣವಾಗಿರುವ ರಾಫೆಲ್ ಜೆಟ್ ಯುದ್ಧ ವಿಮಾನ ಪ್ರಕರಣ ಇದೀಗ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಪ್ರಕರಣ ಸಂಬಂಧ ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ವಿವರ ನೀಡಿದೆಯಾದರೂ, ಸರ್ಕಾರವೇ ನೀಡಿರುವ ವಿವರಗಳಲ್ಲಿ ಹಲವು ಪ್ರಶ್ನೆಗಳು ಉದ್ಭವವಾಗಿವೆ. ಇದೇ ಪ್ರಶ್ನೆಗಳು ಇದೀಗ ಕೇಂದ್ರ ಸರ್ಕಾರದ ತಲೆನೋವಿಗೆ ಕಾರಣವಾಗಿವೆ.
ಹೌದು.. ಇಂದು ಸುಪ್ರೀಂ ಕೋರ್ಟ್ ನಲ್ಲಿ ರಾಫೆಲ್ ಯುದ್ಧ ವಿಮಾನ ಖರೀದ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್, ನ್ಯಾ, ಎಸ್ ಕೆ ಕೌಲ್ ಮತ್ತು ಕೆಎಂ ಜೋಸೆಫ್ ನೇತೃತ್ವ ಪೀಠ ವಿಚಾರಣೆ ನಡೆಸುತ್ತಿದೆ. ಅಂತೆಯೇ ಖ್ಯಾತ ವಕೀಲ ಪ್ರಶಾಂತ್ ಭೂಷಣ್ ಅವರು ಕೇಂದ್ರ ಸರ್ಕಾರಕ್ಕೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಅಲ್ಲದೆ ಹಲವು ಆರೋಪಗಳನ್ನು ಮಾಡಿದ್ದಾರೆ.
ಈ ಪೈಕಿ ಮಾಜಿ ಕೇಂದ್ರ ಸಚಿವ ಯಶ್ವಂತ್ ಸಿನ್ಹಾ, ಅರುಣ್ ಶೌರಿ ಮತ್ತು ಪ್ರಶಾಂತ್ ಭೂಷಣ್ ಅವರು ಸಲ್ಲಿಕೆ ಮಾಡಿರುವ ಅರ್ಜಿಯಲ್ಲಿ ಕೇಂದ್ರದ ಎನ್ ಡಿಎ ಸರ್ಕಾರ 36 ಜೆಟ್ ವಿಮಾನಗಳ ಖರೀದಿ ಪ್ರಕ್ರಿಯೆಯನ್ನು ದಿಢೀರ್ ವೇಗಗೊಳಿಸಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಉದ್ದೇಶ ಪೂರ್ವಕವಾಗಿಯೇ ಅಂದರೆ ಟೆಂಡರ್ ಪ್ರಕ್ರಿಯೆಗೆ ಅವಕಾಶ ನೀಡದಿರಲೆಂದೇ ಸರ್ಕಾರ ಖರೀದಿ ಪ್ರಕ್ರಿಯೆಯನ್ನು ತುರ್ತಾಗಿ ಮುಗಿಸಿದೆ ಎಂದು ಆರೋಪಿಸಿದ್ದಾರೆ.
ವಾಯು ಸೇನೆಗೆ 126 ಯುದ್ಧ ವಿಮಾನಗಳ ಅವಶ್ಯಕತೆ ಇದ್ದಾಗ್ಯೂ ಕೇವಲ 36 ವಿಮಾನಗಳ ಖರೀದಿಗೆ ಸರ್ಕಾರ ಮುಂದಾಗಿತ್ತು. ಇದಕ್ಕಾಗಿ ಡಿಫೆನ್ಸ್ ಅಕ್ವಿಸಿಷನ್ ಕೌನ್ಸಿಲ್ ಮೇಲೆ ಒತ್ತಡ ತಂದಿತ್ತು ಎಂದು ಪ್ರಶಾಂತ್ ಭೂಷಣ್ ಆರೋಪಿಸಿದ್ದಾರೆ. ಅಂತೆಯೇ ಸರ್ಕಾರ ಸಲ್ಲಿಕೆ ಮಾಡಿರುವ ವರದಿಯನ್ನೇ ಉಲ್ಲೇಖ ಮಾಡಿದ ಭೂಷಣ್, ಆರಂಭಿಕ ಹಂತದಲ್ಲಿ ಈ ಪ್ರಕ್ರಿಯೆಯಲ್ಲಿ 6 ವಿದೇಶಿ ವಿಮಾನ ತಯಾರಿಕಾ ಸಂಸ್ಥೆಗಳು ಅರ್ಜಿ ಸಲ್ಲಿಕೆ ಮಾಡಿದ್ದವು. ಈ ಪೈಕಿ 2 ಸಂಸ್ಥೆಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗಿತ್ತು. ಆ ಬಳಿಕ ಫ್ರಾನ್ಸ್ ಮೂಲದ ಡಸ್ಸಾಲ್ಟ್ ಏವಿಯೇಷನ್ ನೊಂದಿಗೆ ಈ ಒಪ್ಪಂದ ಮಾಡಿಕೊಳ್ಳಲಾಯಿತು. ಆಂದಿನ ಒಪ್ಪಂದದಲ್ಲಿ ಎಚ್ ಎಎಲ್ ಕೂಡ ಪಾಲುದಾರನಾಗಿತ್ತು.
ಆದರೆ ದಿಢೀರ್ ಆಗಿ ಒಪ್ಪಂದಲ್ಲಿ ತಿದ್ದುಪಡಿತಂದು, ತಂತ್ರಜ್ಞಾನ ಹಂಚಿಕೆ ತಡೆ ನೀಡಿದ್ದು ಮಾತ್ರವಲ್ಲದೇ 36ಜೆಟ್ ವಿಮಾನಗಳ ಖರೀದಿಗೆ ಮಾತ್ರ ನಿರ್ಧರಿಸಲಾಯಿತು. ಆದರೆ ಸರ್ಕಾರದ ಈ ದಿಢೀರ್ ನಿರ್ಧಾರಕ್ಕೆ ಕಾರಣವೇನು ಎಂದು ತಿಳಿಯುತ್ತಿಲ್ಲ ಎಂದು ಪ್ರಶಾಂತ್ ಭೂಷಣ್ ವಾದಿಸಿದ್ದಾರೆ. ಅಲ್ಲದೆ ಒಪ್ಪಂದವಾಗಿ ಮೂರುವರೆ ವರ್ಷವಾದರೂ ಈ ವರೆಗೂ ಒಂದೇ ಒಂದು ಯುದ್ಥ ವಿಮಾನ ಕೂಡ ಭಾರತಕ್ಕೆ ಬಂದಿಲ್ಲ. ಸೆಪ್ಟೆಂಬರ್ ನಲ್ಲಿ ಮೊದಲ ಜೆಟ್ ಭಾರತಕ್ಕೆ ಹಸ್ತಾಂತರವಾಗಬೇಕಿತ್ತು. ಈ ಹಸ್ತಾಂತರ ಪ್ರಕ್ರಿಯೆ 2022ರವೆರಗೂ ನಡೆಯಲಿದ್ದು, ಒಂದು ವೇಳೆ ಸರ್ಕಾರ 126 ಯುದ್ಧ ವಿಮಾನಗಳ ಖರೀದಿಯತ್ತ ಒಲವು ತೋರಿಸಿದೆ ಎಂದರೆ 2019 ಏಪ್ರಿಲ್ ತಿಂಗಳ ಹೊತ್ತಿಗೆ ಕನಿಷ್ಚ 18 ಯುದ್ಧ ವಿಮಾನಗಳ ಹಸ್ತಾಂತರವಾಗಿರಬೇಕಿತ್ತು ಎಂದು ವಾದಿಸಿದ್ದಾರೆ.
SCROLL FOR NEXT