ಐಜಾಲ್: ಪುಟ್ಟ ಕಣಿವೆ ರಾಜ್ಯ ಮಿಜೋರಾಂ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಸರ್ಕಾರ ರಚನೆಯತ್ತ ಕಣ್ಣಿಟ್ಟಿರುವ ಬಿಜೆಪಿ ಅಚ್ಟರಿ ನಡೆಯೊಂದನ್ನು ಮುಂದಿಟ್ಟಿದ್ದು ತನ್ನ ರಾಜಕೀಯ ವಿರೋಧಿ ಕಾಂಗ್ರೆಸ್ ಜೊತೆ ಚುನಾವಣೋತ್ತರ ಮೈತ್ರಿಗೆ ಮುಂದಾಗಿದೆ.
ಮಿಜೋರಾಂ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರಮುಖ ವಿರೋಧ ಪಕ್ಷವಾದ ಮಿಝೋ ನ್ಯಾಷನಲ್ ಫ್ರಂಟ್, ತಮ್ಮ ಬಿಜೆಪಿ ವಿರೋಧಿ ನೀತಿಯನ್ನು ದೃಢಪಡಿಸಲು ಪ್ರಯತ್ನಿಸುತ್ತಿದ್ದರೆ, ಅತ್ತ ಬಿಜೆಪಿ ಮಾತ್ರ ಇದಕ್ಕೆ ತದ್ವಿರುದ್ಧ ಎಂಬಂತೆ ಕಾಂಗ್ರೆಸ್ ಸೇರಿದಂತೆ ಉಭಯ ಪಕ್ಷಗಳ ಜತೆ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳಲು ಸಿದ್ಧ ಎಂದು ಘೋಷಣೆ ಮಾಡಿದೆ.
ಮಿಜೋರಾಂ ರಾಜಕೀಯ ಇತಿಹಾಸದಲ್ಲೇ ಒಂದೇ ಒಂದು ವಿಧಾನಸಭಾ ಕ್ಷೇತ್ರವನ್ನು ಗೆಲ್ಲದ ಬಿಜೆಪಿ ಪಕ್ಷ ಇದೀಗ ನೇರವಾಗಿ ಸರ್ಕಾರ ರಚನೆಯತ್ತ ಕಣ್ಣಿಟ್ಟಿರುವುದು ರಾಜಕೀಯ ತಜ್ಞರ ಅಚ್ಚರಿಗೆ ಕಾರಣವಾಗಿದೆ. ಸುಮಾರು 10 ಲಕ್ಷ ಜನಸಂಖ್ಯೆ ಹೊಂದಿರುವ ಮಿಜೋರಾಂನಲ್ಲಿ 7.68 ಲಕ್ಷ ಮತದಾರರಿದ್ದಾರೆ. ಇನ್ನು ಈಶಾನ್ಯ ಭಾರತದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಸ್ವಂತ ಬಲದಲ್ಲಿ ಅಥವಾ ಪ್ರಾದೇಶಿಕ ಪಕ್ಷಗಳ ಜತೆ ಮೈತ್ರಿ ಮಾಡಿಕೊಂಡು ಅಧಿಕಾರದಲ್ಲಿದ್ದು, ಬಿಜೆಪಿ ಭೇದಿಸಬೇಕಾಗಿರುವ ಏಕೈಕ ಕೋಟೆ ಎಂದರೆ ಅದು ಮಿಜೋರಾಂ ಮಾತ್ರ.
ಹೀಗಾಗಿ ಕ್ರಿಶ್ಚಿಯನ್ನರ ಪ್ರಾಬಲ್ಯವಿರುವ ಈ ಮಿಜೋರಾಂನಲ್ಲಿ ತನ್ನ ರಾಜಕೀಯ ವೈರತ್ವವನ್ನು ಪಕ್ಕಕ್ಕಿಟ್ಟು ಬಿಜೆಪಿ ಕಾಂಗ್ರೆಸ್ ಜೊತೆ ಚುನಾವಣೋತ್ತರ ಮೈತ್ರಿಗೆ ಮುಂದಾಗಿದೆ ಎನ್ನಲಾಗಿದೆ.
ಅಸ್ಸಾಂನ ಹಣಕಾಸು ಸಚಿವ ಹಿಮಾಂತ ಬಿಸ್ವ ಶರ್ಮಾ ಅವರೇ ಮಿಝೋರಾಂನಲ್ಲಿ ಬಿಜೆಪಿ ಉಸ್ತುವಾರಿ ಹೊಣೆ ಹೊಂದಿದ್ದು, ತಮ್ಮ ಪಕ್ಷ ಎಲ್ಲ ಆಯ್ಕೆಗಳನ್ನು ಮುಕ್ತವಾಗಿ ಇರಿಸಿಕೊಂಡಿರುವುದಾಗಿ ಹೇಳಿದ್ದಾರೆ. ಕಾಂಗ್ರೆಸ್ ಪ್ರಮುಖ ಪ್ರತಿಸ್ಪರ್ಧಿಯಾಗಿದ್ದರೂ, ಮುಖ್ಯಮಂತ್ರಿ ಲಾಲ್ ತಾನ್ವಾಲಾ ಅವರೊಂದಿಗೆ ಚುನಾವಣೋತ್ತರ ಮೈತ್ರಿ ಸಾಧ್ಯತೆಯನ್ನು ಪರಿಶೀಲಿಸುತ್ತಿರುವುದಾಗಿ ಶರ್ಮಾ ಸ್ಪಷ್ಟಪಡಿಸಿದ್ದಾರೆ. ಚುನಾವಣೋತ್ತರ ಮೈತ್ರಿಗೆ ಎಂಎನ್‌ಎಫ್ ಮಾತ್ರ ತಮ್ಮ ಆಯ್ಕೆಯಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
'ಮಿಝೋರಾಂನಲ್ಲಿ ಕಾಂಗ್ರೆಸ್ ಪ್ರತ್ಯೇಕ ಸಂವಿಧಾನವನ್ನು ಹೊಂದಿದೆ. ಇದಕ್ಕೆ ವಿಶಿಷ್ಟ ಇತಿಹಾಸವಿದೆ. ಒಂದು ಪಕ್ಷವಾಗಿ, ದೇಶದ ಇತರ ಭಾಗಗಳಿಗಿಂತ ಇಲ್ಲಿನ ಸಂವಿಧಾನ ಭಿನ್ನ. ಲಾಲ್ ತಾನ್ವಾಲಾ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ವೈಯಕ್ತಿಕವಾಗಿ ನಾವು ಮುಖ್ಯಮಂತ್ರಿ ಜತೆ ಸೌಹಾರ್ದ ಸಂಬಂಧ ಹೊಂದಿದ್ದೇವೆ ಎಂದು ಹಿಮಾಂತ ಬಿಸ್ವ ಶರ್ಮಾ ಹೇಳಿದ್ದಾರೆ.
ಇದೇ ಮಿಜೋರಾಂ ನಲ್ಲಿ ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾ ಅವರು, ಈ ಬಾರಿ ಬಿಜೆಪಿ ಆಡಳಿತದಲ್ಲಿ ಕ್ರಿಸ್ಮಸ್ ಆಚರಿಸಲಿದ್ದೇವೆ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos