ದೇಶ

ಕಾಶ್ಮೀರದಲ್ಲಿ ಪಿಡಿಪಿ, ಎನ್ ಸಿ, ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆ?

Lingaraj Badiger
ಶ್ರೀನಗರ: ಸದ್ಯ ರಾಷ್ಟ್ರಪತಿ ಆಡಳಿತವಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದ್ದು, ಪಿಡಿಪಿ, ಎನ್ ಸಿ ಹಾಗೂ ಕಾಂಗ್ರೆಸ್ ಪರಸ್ಪರ ಭಿನ್ನಾಭಿಪ್ರಾಯ ಮರೆತು ಕಣಿವೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಮಾಡುವ ಬಗ್ಗೆ ಗಂಭೀರ ಚರ್ಚೆ ನಡೆಸುತ್ತಿವೆ.
ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತ ಮುಂದಿನ ತಿಂಗಳು ಅಂತ್ಯಗೊಳ್ಳುತ್ತಿದ್ದು, ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಈ ಮೂರು ಪಕ್ಷಗಳ ಒಂದಾಗುತ್ತಿವೆ ಎಂದು ವರದಿಗಳು ತಿಳಿಸಿವೆ.
ವರದಿಗಳ ಪ್ರಕಾರ, ಎನ್ ಸಿ ಬಾಹ್ಯ ಬೆಂಬಲದೊಂದಿಗೆ ಪಿಡಿಪಿ, ಕಾಂಗ್ರೆಸ್ ಜೊತೆ ಸೇರಿ ಸಮ್ಮಿಶ್ರ ಸರ್ಕಾರ ರಚನೆಗೆ ಮುಂದಾಗಿದೆ. ಈ ಸಂಬಂಧ ಮಾಜಿ ಸಚಿವ, ಪಿಡಿಪಿ ಹಿರಿಯ ನಾಯಕ ಅಲ್ತಾಫ್ ಬುಖಾರಿ ಅವರು ಎನ್ ಸಿ ಉಪಾಧ್ಯಾಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಹಾ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಜನತೆಗೆ ಶೀಘ್ರದಲ್ಲೇ ಸಿಹಿ ಸುದ್ದಿ ನೀಡುತ್ತೇವೆ. ರಾಜ್ಯದಲ್ಲಿ ಸರ್ಕಾರ ರಚಿಸಲು ಪಿಡಿಪಿ, ಕಾಂಗ್ರೆಸ್ ಮತ್ತು ಎನ್ ಸಿ ಕೈಜೋಡಿಸಲು ನಿರ್ಧರಿಸಿವೆ ಎಂದು ಬುಖಾರಿ ಅವರು ತಿಳಿಸಿದ್ದಾರೆ.
ಇನ್ನು ಸಮ್ಮಿಶ್ರ ಸರ್ಕಾರ ರಚನೆಯ ಕುರಿತ ವರದಿಗಳನ್ನು ಖಚಿತಪಡಿಸಿದ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಮುಖ್ಯಮಂತ್ರಿ ಗುಲಾಮ್ ನಬಿ ಆಜಾದ್ ಅವರು, ಮೂರು ಪಕ್ಷಗಳ ನಡುವೆ ಮಾತುಕತೆ ನಡೆಯುತ್ತಿದೆ ಎಂದಿದ್ದಾರೆ.
87 ಸದಸ್ಯ ಬಲದ ಕಾಶ್ಮೀರ ವಿಧಾನಸಭೆಯಲ್ಲಿ ಪಿಡಿಪಿ 28, ಎನ್ ಸಿ 15, ಕಾಂಗ್ರೆಸ್ 12 ಹಾಗೂ ಬಿಜೆಪಿ 26 ಸದಸ್ಯರನ್ನು ಹೊಂದಿದೆ. ಬಹುಮತಕ್ಕೆ 44 ಸದಸ್ಯರ ಅಗತ್ಯವಿದೆ.
SCROLL FOR NEXT