ಲ್ಯಾನ್ಸ್ ನಾಯಕ್ ನಝೀರ್ ಅಹ್ಮದ್ ವಾನಿ
ಶ್ರೀನಗರ: ಜಮ್ಮ ಮತ್ತು ಕಾಶ್ಮೀರದ ಶೋಪಿಯಾನ ಜಿಲ್ಲೆಯಲ್ಲಿ ಭಾರತೀಯ ಯೋಧರು ಮತ್ತು ಉಗ್ರರ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಭಾರತೀಯ ಸೇನೆಯ ಲ್ಯಾನ್ಸ್ ನಾಯಕ ನಝೀರ್ ಅಹ್ಮದ್ ವಾನಿ ಭಾರತಾಂಬೆಗೆ ತಮ್ಮ ರಕ್ತದ ತರ್ಪಣ ನೀಡಿ ಹುತಾತ್ಮರಾಗಿದ್ದಾರೆ.
ಇನ್ನು ನಝೀರ್ ಅಹ್ಮದ್ ವಾನಿ ಅವರ ಜೀವನ ನಿಜಕ್ಕೂ ಅನುಕರಣಿಯ, ಆದರ್ಶನ ಜೀವನಕ್ಕೆ ಉದಾಹರಣೆ ನೀಡಿ ವಾನಿ ನಮ್ಮನ್ನು ಅಗಲಿದ್ದಾರೆ. ವಾನಿ ಈ ಹಿಂದೆ ಭಯೋತ್ಪಾದಕ ಸಂಘಟನೆಯಲ್ಲಿ ಸಕ್ರೀಯರಾಗಿದ್ದರು. ಜಮ್ಮು ಮತ್ತು ಕಾಶ್ಮೀರದ ಸ್ವಾತಂತ್ರ್ಯದ ಪರವಾಗಿದ್ದ ವಾನಿ ಉಗ್ರವಾದಿ ಸಂಘಟನೆ ಸೇರಿ ಭಾರತದ ವಿರುದ್ಧ ಯುದ್ಧ ಸಾರಿದ್ದರು.
ಬಳಿಕ ತನ್ನ ದಾರಿ ಸರಿಯಲ್ಲ ಎಂದು ಮನವರಿಕೆಯಾದ ಬಳಿಕ ವಾನಿ ಭಯೋತ್ಪಾದಕ ಸಂಘಟನೆಯನ್ನು ತೊರೆದು ಭಾರತೀಯ ಸೈನ್ಯದ ಮುಂದೆ ಶರಣಾಗಿದ್ದರು. ಅದೇ ಸೇನೆಯಲ್ಲಿ ವಾನಿ ಲ್ಯಾನ್ಸ್ ನಾಯಕ್ ಆಗಿ ನೇಮಕಗೊಂಡಿದ್ದರು.
ಕಳೆದ ಭಾನುವಾರ ಭಾರತೀಯ ಸೇನೆ ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿ 6 ಉಗ್ರರನ್ನು ಸದೆ ಬಡಿದಿತ್ತು. ಈ ಸಂದರ್ಭದಲ್ಲಿ ಲ್ಯಾನ್ಸ್ ನಾಯಕ್ ವಾನಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ನಝೀರ್ ಅಹ್ಮದ್ ವಾನಿ ದಕ್ಷಿಣ ಕಾಶ್ಮೀರದ ಕುಲ್ಗಾಮ್ ನ ಚೆಕಿ ಅಸ್ಮುಜಿ ಗ್ರಾಮದವರಾಗಿದ್ದರು. 2004ರಲ್ಲಿ ಭಾರತೀಯ ಸೇನೆಗೆ ಸೇರಿದ್ದರು. ಅಲ್ಲದೆ 2007ರಲ್ಲಿ ವಾನಿ ಶೌರ್ಯ ಪ್ರಶಸ್ತಿಯನ್ನು ಪಡೆದಿದ್ದರು.