ದೇಶ

ಶಬರಿಮಲೆ ಅಯ್ಯಪ್ಪ ದರ್ಶನಕ್ಕೆ ಮಹಿಳೆಯರಿಗೆ ಪ್ರವೇಶ : ಸುಪ್ರೀಂ ತೀರ್ಪು ವಿರೋಧಿಸಿ ಪ್ರತಿಭಟನೆ !

Nagaraja AB

ದೆಹಲಿ: ಶಬರಿಮಲೆ ಅಯ್ಯಪ್ಪ ದರ್ಶನಕ್ಕೆ 10 ರಿಂದ 50 ವರ್ಷದೊಳಗಿನ  ಮಹಿಳೆಯರಿಗೆ ಪ್ರವೇಶ ಕಲ್ಪಿಸಿರುವ ಸುಪ್ರೀಂಕೋರ್ಟ್ ತೀರ್ಪು ವಿರೋಧಿಸಿ  ಅಯ್ಯಪ್ಪ ಭಕ್ತಾಧಿಗಳ ಸಂಘಟನೆಗಳು ಇಂದು ಕೊಚ್ಚಿ, ದೆಹಲಿ, ಬೆಂಗಳೂರು ಸೇರಿದಂತೆ ದೇಶದ ಹಲವೆಡೆ ಪ್ರತಿಭಟನೆ ನಡೆಸಿದರು.

ರಾಷ್ಟ್ರ ರಾಜಧಾನಿ ದೆಹಲಿಯ ಜಂಥರ್ ಮಂಥರ್ ಬಳಿಯಲ್ಲಿ ಅಯ್ಯಪ್ಪ ಭಕ್ತಾಧಿಗಳ ಸಂಘಟನೆಯಿಂದ ಅಯ್ಯಪ್ಪ ನಾಮ ಜಪ ಯಾತ್ರೆ ಆಯೋಜಿಸಲಾಗಿತ್ತು.  ಅಯ್ಯಪ್ಪ ದರ್ಶನಕ್ಕೆ ಮಹಿಳೆಯರಿಗೆ ಅವಕಾಶ ಕಲ್ಪಿಸುವ ತೀರ್ಪಿನಿಂದ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯಕ್ಕೆ ಧಕ್ಕೆ ಆಗಲಿದ್ದು, ಕೂಡಲೇ ಈ ತೀರ್ಪನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.

ಕೇರಳದ ಕೊಚ್ಚಿಯಲ್ಲಿ ಪ್ರತಿಭಟನೆ ನಡೆಸಿದ ಭಕ್ತಾಧಿಗಳು, ದೇವಾಲಯದ ಆಚರಣೆ ಹಾಗೂ ಸಂಪ್ರದಾಯ ರಕ್ಷಿಸುವ ನಿಟ್ಟಿನಲ್ಲಿ  ಸುಪ್ರೀಂಕೋರ್ಟ್  ತೀರ್ಪು  ಪ್ರಶ್ನಿಸಿ ರಾಜ್ಯಸರ್ಕಾರದಿಂದ ಪುನರ್ ಪರಿಶೀಲನಾ ಅರ್ಜಿ  ಸಲ್ಲಿಸಬೇಕೆಂದು ಆಗ್ರಹಿಸಿದರು.

ತಮಿಳುನಾಡು ರಾಜಧಾನಿ ಚೆನ್ನೈನಲ್ಲಿನ ಕೊಡಂಬಾಕ್ಕಂ  ಮುಖ್ಯರಸ್ತೆಯಿಂದ ಮಹಲಿಂಗಪುರಂ ಅಯ್ಯಪ್ಪ ದೇವಸ್ಥಾನದವರೆವಿಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಶಬರಿಮಲೆ ಉಳಿಸಲು ಸುಪ್ರೀಂಕೋರ್ಟ್ ತೀರ್ಪು ಮರು ಪರೀಶಿಲಿಸುವಂತೆ ಒತ್ತಾಯಿಸಿದರು.

SCROLL FOR NEXT