#MeToo: ಎಂಎಎಂಐ ಮಂಡಳಿ ಸದಸ್ಯ ಸ್ಥಾನದಿಂದ ಕೆಳಗಿಳಿದ ಅನುರಾಗ್ ಕಶ್ಯಪ್
ಮುಂಬೈ: ಮುಂಬೈ ಅಕಾಡೆಮಿ ಆಫ್ ದಿ ಮೂವಿಂಗ್ ಇಮೇಜ್ (ಎಂಎಎಂಐ) ಮಂಡಳಿಯ ಸದಸ್ಯ ಸ್ಥಾನದಿಂದ ಕೆಳಗಿಳಿಯುವುದಕ್ಕೆ ನಿರ್ಧರಿಸಿರುವುದಾಗಿ ಚಿತ್ರ ನಿರ್ದೇಶಕ ಅನುರಾಗ್ ಕಶ್ಯಪ್ ಹೇಳಿದ್ದಾರೆ.
ಎಂಎಎಂಐ ಸ್ಥಾಪನೆಯಾದಾಗಿನಿಂದಲೂ ಅದರ ಸದಸ್ಯರಾಗಿರುವ ಅನುರಾಗ್ ಕಶ್ಯಪ್, ಲೈಂಗಿಕ ಕಿರುಕುಳ ನೀಡಿರುವ ಆರೋಪ ಎದುರಿಸುತ್ತಿರುವ ನಿರ್ದೇಶಕ ವಿಕಾಸ್ ಬಾಲ್ಹ್ ಅವರನ್ನು ರಕ್ಷಿಸುತ್ತಿರುವ ಆರೋಪ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎಂಎಎಂಐ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದು ಕಳಂಕ ಮುಕ್ತನಾಗಿ ಬಂದ ನಂತರ ನಾನು ಸದಸ್ಯತ್ವ ಪುನಃ ಸ್ವೀಕರಿಸುತ್ತೇನೆ ಎಂದು ಅನುರಾಗ್ ಕಶ್ಯಪ್ ಹೇಳಿದ್ದಾರೆ.
2015 ರಲ್ಲಿ ಗೋವಾ ಪ್ರವಾಸಕ್ಕೆ ತೆರಳಿದ್ದಾಗ ವಿಕಾಸ್ ಬಾಲ್ಹ್ ಅವರು ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು, ಈ ಮಹಿಳೆ ಬಾಲ್ಹ್ ಅವರ ಫ್ಯಾಂಟಮ್ ಫಿಲ್ಮ್ಸ್ ನ ಉದ್ಯೋಗಿಯಾಗಿದ್ದು, ಫ್ಯಾಂಟಮ್ ಫಿಲ್ಮ್ಸ್ ಗೆ ಅನುರಾಗ್ ಕಶ್ಯಪ್, ವಿಕ್ರಮಾದಿತ್ಯ ಮೋಟ್ವನೆ ಮಧು ಮಂಟೇನಾ ಅವರು ಪಾಲುದಾರರಾಗಿದ್ದಾರೆ.
ನಿರ್ದೇಶಕ ವಿಕಾಸ್ ಬಾಲ್ಹ್ ಅವರನ್ನು ಲೈಂಗಿಕ ಕಿರುಕುಳ ಆರೋಪ ಪ್ರಕರಣದಲ್ಲಿ ರಕ್ಷಿಸುತ್ತಿದ್ದೇನೆ ಎಂಬ ಆರೋಪ ಮಾಡುವವರು ಸಂಪೂರ್ಣ ಮಾಹಿತಿ ತಿಳಿಯದೇ ಆರೋಪಿಸುವವರಿಗೆ ಯಾವುದೇ ರೀತಿಯ ಪ್ರತಿಕ್ರಿಯೆಯನ್ನೂ ನೀಡುವುದಿಲ್ಲ ಎಂದು ಅನುರಾಗ್ ಕಶ್ಯಪ್ ಹೇಳಿದ್ದಾರೆ.