ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ
ನವದೆಹಲಿ: ವಿದೇಶಾಂಗ ಖಾತೆ ರಾಜ್ಯ ಸಚಿವ ಎಂ.ಜೆ. ಅಕ್ಬರ್ ವಿರುದ್ಧ ಕೇಳಿ ಬಂದಿರುವ ಲೈಂಗಿಕ ಕಿರುಕುಳ ಆರೋಪ ಕುರಿತು ಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಶನಿವಾರ ಹೇಳಿದ್ದಾರೆ.
ಪತ್ರಕರ್ತರಾಗಿದ್ದಾಗ ಹಲವು ಮಹಿಳಾ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪ ಎದುರಿಸುತ್ತಿರುವ ವಿದೇಶಾಂಗ ಖಾತೆ ರಾಜ್ಯ ಸಚಿವ ಎಂ.ಜೆ ಅಕ್ಬರ್ ರಾಜೀನಾಮೆಗೆ ಒತ್ತಡಗಳು ಹೆಚ್ಚಾಗತೊಡಗಿದ್ದು, ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅಮಿತ್ ಅವರು ಅವರು, ಅಕ್ಬರ್ ವಿರುದ್ಧಧ ಆರೋಪಗಳು ಕುರಿತು ಪರಿಶೀಲನೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ಅಕ್ಬರ್ ವಿರುದ್ಧದ ಆರೋಪಗಳು ನಿಜವೋ, ಸುಳ್ಳೋ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಸಾಮಾಜಿಕ ಜಾಲತಾಣಗಳಲ್ಲಿ ಬರೆಯಲಾಗಿರುವ ಮಾಹಿತಿ ಹಾಗೂ ಅದನ್ನು ಬರೆದವರ ಸತ್ಯಾಸತ್ಯತೆಯನ್ನೂ ನಾವು ಗಮನಿಸಬೇಕಾಗಿದೆ. ನನ್ನ ಹೆಸರು ಬಳಸಿ ನೀವು ಕೂಡ ಏನು ಬೇಕಾದರೂ ಬರೆಯಬಹುದು. ಅದಾಗಿಯೂ ಆ ಬಗ್ಗೆ ಪರಿಶೀಲನೆ ನಡೆಸುತ್ತೇವೆಂದು ತಿಳಿಸಿದ್ದಾರೆ.
ಈ ನಡುವೆ ವಿದೇಶ ಪ್ರವಾಸ ಮುಗಿಸಿರುವ ಅಕ್ಬರ್ ಅವರು ಭಾನುವಾರವಷ್ಟೇ ರಾಜಧಾನಿ ದೆಹಲಿಗೆ ಆಗಮಿಸಿದ್ದಾರೆ. ಅವರು ಪಕ್ಷ ನಾಯಕರನ್ನು ಭೇಟಿ ಮಾಡಿ ತಮ್ಮ ವಿರುದ್ಧದ ಆರೋಪಗಳ ಕುರಿತಂತೆ ಸ್ಪಷ್ಟನೆ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.