ದೇಶ

ಶಬರಿಮಲೆ: ಬಿಕ್ಕಟ್ಟು ಪರಿಹಾರ ಮಾತುಕತೆ ವಿಫಲ- ಪಂಡಲಂ ರಾಯಲ್ ಕುಟುಂಬ ಹೇಳಿಕೆ

Nagaraja AB

ತಿರುವನಂತಪುರಂ: ಇತಿಹಾಸ ಪ್ರಸಿದ್ಧ ಕೇರಳದ ಧಾರ್ಮಿಕ ಕೇಂದ್ರ ಶಬರಿಮಲೆ ನಾಳೆಯಿಂದ ಪುನರ್ ಆರಂಭಗೊಳ್ಳಲಿದ್ದು, ಎಲ್ಲಾ ವಯೋಮಾನದ ಮಹಿಳೆಯರು ಅಯ್ಯಪ್ಪ ದರ್ಶನ ಪಡೆದು ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸುವ  ಬಗ್ಗೆ ಟ್ರಾವಂಕೂರು ದೇವಸ್ಥಾನ ಮಂಡಳಿ ಹಾಗೂ ಪಂಡಲಂ ರಾಯಲ್ ಕುಟುಂಬ ಸೇರಿದಂತೆ ವಿವಿಧ ಸಂಘಟನೆಗಳೊಂದಿಗೆ ಇಂದು ನಡೆದ ಮಾತುಕತೆಯಲ್ಲಿ ಒಮ್ಮತ ಮೂಡದೆ ವಿಫಲವಾಗಿದೆ.

ಸಭೆಯಿಂದ ಹೊರ ನಡೆದ ಪಂಡಲಂ ಪ್ಯಾಲೇಸ್ ಸಮನ್ವಯ ಸಮಿತಿ ಅಧ್ಯಕ್ಷ  ಶಶಿಕುಮಾರ್ ವರ್ಮಾ, ಭಕ್ತಾಧಿಗಳು ಎತ್ತಿದ ಸಮಸ್ಯೆಗಳ ಬಗ್ಗೆ ಸಹಮತ ಮೂಡದೆ ಸಭೆ ವಿಫಲವಾಗಿದೆ. ಶಬರಿಮಲೆಯಲ್ಲಿ ಮಹಿಳೆಯರು ಪೂಜೆ ಸಲ್ಲಿಸಲು ಅವಕಾಶ ನೀಡುವ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ಕೂಡಲೇ ಮರು ಪರಿಶೀಲನಾ ಅರ್ಜಿ ಸಲ್ಲಿಸುವಂತೆ ಒತ್ತಾಯಿಸಲಾಯಿತು ಎಂದು ಹೇಳಿದರು.

ಆದರೆ, ಭಕ್ತಾಧಿಗಳ ಬೇಡಿಕೆಯನ್ನು ತಿರಸ್ಕರಿಸಿದ ಟಿಡಿಬಿ,  ಶುಕ್ರವಾರ ನಡೆಯಲಿರುವ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲು ಅವಕಾಶ ನೀಡುವಂತೆ  ಮನವಿ ಮಾಡಿತು.
ಮುಂಬರುವ ದಿನಗಳಲ್ಲಿ ಪ್ರತಿಭಟನೆ ನಡೆಸಲು ಧಾರ್ಮಿಕ ಮುಖಂಡರು ಹಾಗೂ ಪಂಡಲಂ ಪ್ಯಾಲೇಸ್, ಅಖಿಲ ಭಾರತ ಅಯ್ಯಪ್ಪ ಸೇವಾ ಸಂಘಂ, ಮತ್ತು ಶಬರಿಮಲೆ ಅಯ್ಯಪ್ಪ ಸೇವಾ ಸಮಾಜ ಸೇರಿದಂತೆ ಮತ್ತಿತರ ಸಂಘಟನೆಗಳ ಮನವೊಲಿಸಲು ಶೀಘ್ರದಲ್ಲಿಯೇ ಸಭೆ ನಡೆಸುವ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ಅವರು ತಿಳಿಸಿದರು.
SCROLL FOR NEXT