ದೇಶ

ಅಲಹಾಬಾದ್ ಇನ್ಮುಂದೆ 'ಪ್ರಯಾಗ್ ರಾಜ್'; ಮರುನಾಮಕರಣಕ್ಕೆ ಯೋಗಿ ಸಂಪುಟ ಅನುಮೋದನೆ

Srinivasamurthy VN
ಲಖನೌ: ಪ್ರಯಾಗನಗರಿ ಅಲಹಾಬಾದ್ ಅನ್ನು ಪ್ರಯಾಗ್ ರಾಜ್ ಎಂದು ಉತ್ತರ ಪ್ರದೇಶ ಸರ್ಕಾರ ಮರುನಾಮಕರಣ ಮಾಡಿದೆ.
ಅಲಹಾಬಾದ್ ನಗರಕ್ಕೆ ಪ್ರಯಾಗ್ ರಾಜ್ ಎಂದು ಮರುನಾಮಕರಣ ಮಾಡುವ ಗೊತ್ತುವಳಿಗೆ ಸಿಎಂ ಯೋಗಿ ಆದಿತ್ಯಾನಾಥ್ ನೇತೃತ್ವದ ಸಂಪುಟ ಸಭೆ ಅನುಮೋದನೆ ನೀಡಿದ್ದು, ಇಂದಿನಿಂದಲೇ ಅಲಹಾಬಾದ್ ನಗರವನ್ನು ಪ್ರಯಾಗ್ ರಾಜ್ ಎಂದು ಕರೆಯುವಂತೆ ಸುತ್ತೋಲೆ ಹೊರಡಿಸಲಾಗಿದೆ.
ನೂತನ ಹೆಸರು ಇಂದಿನಿಂದ ಜಾರಿಗೆ ಬಂದಿರುವುದಾಗಿ ರಾಜ್ಯದ ಸಚಿವ ಸಿದ್ಧಾರ್ಥ್ ನಾಥ್ ಸಿಂಗ್ ಅವರು ಹೇಳಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಅಂತೆಯೇ ಈ ಕುರಿತಂತೆ ಹೊಸ ಆದೇಶವನ್ನು ಪಾಲನೆ ಮಾಡಲು ಸರಕಾರದ ಪ್ರತಿಯೊಂದು ಇಲಾಖೆಗೂ ಸುತ್ತೋಲೆ ಕಳುಹಿಸಲಾಗುವುದು ಎಂದು ಸಂಪುಟ ತಿಳಿಸಿದೆ.
ಈ ಹಿಂದೆ ಇದೇ ಯೋಗಿ ಸರ್ಕಾರ, ಮುಘಲ್‌ಸರಾಯ್‌ ಜಂಕ್ಷನ್ ಮತ್ತು ಮುಘಲ್‌ಸರಾಯ್‌ ಅನ್ನು ಕ್ರಮವಾಗಿ ಪಂಡಿತ್‌ ದೀನ್‌ದಯಾಳ್‌ ಉಪಾಧ್ಯಾಯ ಜಂಕ್ಷನ್ ಹಾಗೂ ದೀನ್‌ ದಯಾಳ್‌ ಉಪಾಧ್ಯಾಯ ನಗರ ಎಂದು ಮರುನಾಮಕರಣ ಮಾಡಿತ್ತು. 
ಅಲ್ಲದೇ ಅಲಹಾಬಾದ್ ಮರುನಾಮಕರಣದ ಕುರಿತು ಸುಳಿವು ಬಿಟ್ಟುಕೊಟ್ಟಿದ್ದ ಸಿಎಂ ಯೋಗಿ ಆದಿತ್ಯಾನಾಥ್ ಅವರು,'ಗಂಗೆ ಹಾಗೂ ಯಮುನೆಯರು ಕೂಡುವ ಪವಿತ್ರ ಸಂಗಮ ಸ್ಥಳವಾದ ಕಾರಣ ಮತ್ತು ಈ ಊರು ಎಲ್ಲ ಪ್ರಯಾಗಗಳ ರಾಜನಾದ ಕಾರಣ ಅಲಹಾಬಾದ್‌ ಅನ್ನು ಪ್ರಾಯಾಗ್‌‌ರಾಜ್‌ ಎಂದು ಕರೆಯುತ್ತೇವೆ. ಅಲಹಾಬಾದ್‌ ಅನ್ನು ಪ್ರಯಾಗ್‌ರಾಜ್‌ ಎಂದು ಕರೆಯಬೇಕೆಂಬುದು ಕೆಲವರ ಆಶಾಯವಾಗಿದೆ. ಎಲ್ಲರೂ ಒಪ್ಪಿದರೆ ಈ ನಗರವನ್ನು ಪ್ರಯಾಗ್‌ರಾಜ್‌ ಎಂದು ಕರೆಯುತ್ತೇವೆ. ಇದೊಂದು ಉತ್ತಮ ಆರಂಭವಾಗಲಿದೆ' ಎಂದು ಹೇಳಿದ್ದರು.
SCROLL FOR NEXT