ಶ್ರೀನಗರ: ಜಮ್ಮು-ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದ ಭಾರತೀಯ ಸೇನೆ ಮೂವರು ಉಗ್ರರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದೆ ಆದರೆ, ಈ ವೇಳೆ ನಡೆದಿರುವ ಬಾಂಬ್ ದಾಳಿಯಲ್ಲಿ 7 ಮಂದಿ ನಾಗರೀಕರು ಬಲಿಯಾಗಿದ್ದಾರೆಂದು ಸೋಮವಾರ ತಿಳಿದುಬಂದಿದೆ.
ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯ ಲಾರೂ ಪ್ರದೇಶದಲ್ಲಿ ಕೆಲ ಉಗ್ರರು ಅಡಗಿ ಕುಳಿತಿದ್ದಾರೆಂಬ ಖಚಿತ ಮಾಹಿತಿ ತಿಳಿದುಬಂದ ಹಿನ್ನಲೆಯಲ್ಲಿ ಸೇನಾಪಡೆಗಳು ಕಾರ್ಯಾಚರಣೆ ಆರಂಭಿಸಿದ್ದವು.
ಈ ವೇಳೆ ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಪ್ರತಿದಾಳಿ ನಡೆಸಿದ್ದ ಸೇನಾಪಡೆಗಳು ಮೂವರು ಉಗ್ರರನ್ನು ಹತ್ಯೆ ಮಾಡಿದೆ. ಕಾರ್ಯಾಚರಣೆ ಅಂತ್ಯಗೊಂಡ ಬಳಿ ಸ್ಥಳಕ್ಕೆ ಯಾರೂ ಸುಳಿಯದಂತೆ ಸೇನೆ ಸೂಚಿಸಿತ್ತು. ಇದರ ಹೊರತಾಗಿಯೂ, ಕೆಲ ನಾಗರೀಕರು ಸ್ಥಳಕ್ಕೆ ಬಂದಿದ್ದಾರೆ.
ಈ ವೇಳೆ ಬಾಂಬ್ ಸ್ಫೋಟಗೊಂಡಿರುವ ಪರಿಣಾಮ 7 ನಾಗರೀಕರು ಸಾವನ್ನಪ್ಪಿದ್ದಾರೆ. ಈ ನಡುವೆ ಘಟನೆ ಬಳಿಕ ಭದ್ರತಾ ಪಡೆ ಹಾಗೂ ಯುವಕರ ನಡುವೆ ಘರ್ಷಣೆ ಏರ್ಪಟ್ಟಿದ್ದು, ಜನರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಘಟನೆಯಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ಈ ನಡುವೆ 7 ನಾಗರೀಕರ ಸಾವು ಹಾಗೂ ನಾಗರೀಕರು ಗಾಯಗೊಂಡಿರುವ ಘಟನೆಗೆ ತೀವ್ರ ಖಂಡನೆ ವ್ಯಕ್ತವಾಗುತ್ತಿದ್ದು, ಕಾಶ್ಮೀರದಾದ್ಯಂತ ಇಂದು ಬಂದ್ ಆಚರಿಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.
ಪುಲ್ವಾಮದಲ್ಲಿ ಸ್ನೈಪರ್ ದಾಳಿ ನಡೆಸಿರುವ ಉಗ್ರರು ಓರ್ವ ಯೋಧನನ್ನು ಬಲಿಪಡೆದುಕೊಂಡಿದ್ದಾರೆ. ಯೋಧ ವಿಜಯ್ ಕುಮಾರ್ ಎಂಬುವವರು ಹುತಾತ್ಮರಾಗಿದ್ದಾರೆಂದು ವರದಿಗಳು ತಿಳಿಸಿವೆ.
2 ಬ್ಯಾಟ್ ನುಸುಳುಕೋರರ ಹತ್ಯೆಗೈದ ಸೇನೆ, 3 ಯೋಧರು ಹುತಾತ್ಮ
ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳೊಂದಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತದ ಗಡಿ ನುಸುಳಲು ಯತ್ನಿಸುತ್ತಿದ್ದ ಇಬ್ಬರು ಪಾಕಿಸ್ತಾನ ಮೂಲದ ನುಸುಳುಕೋರರನ್ನು ಸೇನೆ ಹತ್ಯೆ ಮಾಡಿದೆ. ಅಲ್ಲದೆ, ಈ ಗುಂಡಿನ ಚಕಮಕಿಯಲ್ಲಿ ಮೂವರು ಯೋಘರು ಹುತಾತ್ಮರಾಗಿದ್ದಾರೆಂದು ತಿಳಿದುಬಂದಿದೆ.
ಪಾಕಿಸ್ತಾನ ಸೇನೆ ಮತ್ತು ಯುದ್ಧ ತರಬೇತಿ ಪಡೆದ ಉಗ್ರರನ್ನೊಳಗೊಂಡ ಬ್ಯಾಡ್ (ಬಾರ್ಡರ್ ಆ್ಯಕ್ಷನ್ ಟೀಂ) ಸದಸ್ಯರು ಎನ್ನಲಾದ ನುಸುಳುಕೋರರು ಭಾರತದ ಗಡಿಯತ್ತ ಆಗಮಿಸಿದ್ದರು. ಈ ವೇಳೆ ರಜೌರಿ ಜಿಲ್ಲೆಯ ಸುಂದರ್ ಬನಿ ಸೆಕ್ಟರ್ ನಲ್ಲಿ ಇಬ್ಬರು ನುಸುಳುಕೋರರನ್ನು ಸೇನೆ ಹತ್ಯೆ ಮಾಡಿದೆ
ಅಲ್ಲದೆ, ಎರಡು ಎಕೆ-47 ರೈಫಲ್ ಗಳು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಆದರೆ, ಈ ವೇಳೆ ಭಾರತದ ಮೂವರು ಯೋಧರು ವೀರ ಮರಣವನ್ನಪ್ಪಿದ್ದಾರೆ.