ಕೋಲ್ಕತಾ: ದೆಹಲಿಯ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇದೇ ರೀತಿಯ ಮತ್ತೊಂದು ಪ್ರಕರಣವೊಂದು ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಮಹಿಳೆಯೊಬ್ಬರ ಮೇಲೆ ಅತ್ಯಾಚಾರವೆಸಗಿದ ಕಾಮುಕರು ನಂತರ ಆಕೆಯ ಗುಪ್ತಾಂಗಕ್ಕೆ ಕಬ್ಬಿಣದ ರಾಡ್ ತುರುಕಿ ಪೈಶಾಚಿಕ ಕೃತ್ಯವೆಸಗಿರುವ ಘಟನೆ ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯಲ್ಲಿ ನಡೆದಿದೆ.
ಪ್ರಸ್ತುತ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.
ಮಹಿಳೆ ಮೇಲೆ ಅತ್ಯಾಚಾರವೆಸಗಿದ ಕಾಮುಕರು ಆಕೆಯ ಸಂಬಂಧಿಕರೆಂದೇ ಹೇಳಲಾಗುತ್ತಿದೆ. ಮಹಿಳೆಯ ಕುಟುಂಬಸ್ಥರು ಹಾಗೂ ಕಾಮುಕರ ನಡುವೆ ಭೂಮಿ ವಿಚಾರಕ್ಕೆ ವೈಷಮ್ಯವಿತ್ತು. ಇದರಂತೆ ಶನಿವಾರ ಮಹಿಳೆಯರ ಪತಿ ಮನೆಯಲ್ಲಿಲ್ಲದ ಸಂದರ್ಭವನ್ನು ನೋಡಿಕೊಂಡ ಕಾಮುಕರು, ಭೂಮಿ ವಿಚಾರವನ್ನು ಬಗೆಹರಿಸುವುದಾಗಿ ಹೇಳಿ, ಆಕೆಯ ಮನವೊಲಿಸಿ ಆಕೆಯನ್ನು ಮನೆಯಿಂದ ಹೊರಬರುವಂತೆ ಮಾಡಿದ್ದಾರೆ. ನಂತರ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಎಳೆದುಕೊಂಡು ಹೋಗಿ ಅತ್ಯಾಚಾರವೆಸಗಿ ಆಕೆಯ ಗುಪ್ತಾಂಗಕ್ಕೆ ಕಬ್ಬಿಣದ ರಾಡ್ ಹಾಕಿದ್ದಾರೆ.
ಘಟನೆ ಬಳಿಕ ಸ್ಥಳದಲ್ಲಿ ಹೋಗುತ್ತಿದ್ದ ಆಟೋ ಚಾಲಕನೊಬ್ಬ ಮಹಿಳೆಯನ್ನು ನೋಡಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾನೆಂದು ಪೊಲೀಸರು ಹೇಳಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಹಾಗೂ ಆತನೊಂದಿಗಿದ್ದ ಮತ್ತೊಬ್ಬ ವ್ಯಕ್ತಿಯನ್ನು ಬಂಧನಕ್ಕೊಳಪಡಿಸಿ, ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.