ಭಾರತದ ನೌಕಾ ಪಡೆಗೆ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಪೂರೈಕೆ: ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ ಪಾಲಾದ 777 ಮಿಲಿಯನ್ ಡಾಲರ್ ಯೋಜನೆ
ಟೆಲ್ ಅವೀವ್: ಭಾರತದ ನೌಕಾಪಡೆಗೆ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಹಾಗೂ ದೀರ್ಘ ವ್ಯಾಪ್ತಿಯ ಭೂಮಿಯಿಂದ ಆಗಸಕ್ಕೆ ಚಿಮ್ಮುವ ಸಾಮರ್ಥ್ಯವುಳ್ಳ ಕ್ಷಿಪಣಿಗಳ ಪೂರೈಕೆ ಗುತ್ತಿಗೆ ಇಸ್ರೇಲ್ ನ ಏರೋಸ್ಪೇಸ್ ಇಂಡಸ್ಟ್ರೀಸ್ ಪಾಲಾಗಿದೆ.
ನೌಕಾಪಡೆಯಲ್ಲಿರುವ 7 ಹಡಗುಗಳಿಗೆ ಬೇಕಾಗಿರುವ ಸುಮಾರು 777 ಮಿಲಿಯನ್ ಡಾಲರ್ ವೆಚ್ಚದ ಕ್ಷಿಪಣಿ ವ್ಯವಸ್ಥೆ ಪೂರೈಕೆ ಗುತ್ತಿಗೆ ಸಂಸ್ಥೆಗೆ ಸಿಕ್ಕಿದೆ ಎಂದು ಇಸ್ರೇಲ್ ನ ಸರ್ಕಾರಿ ಸ್ವಾಮ್ಯದ ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (ಐಎಐ) ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಗುತ್ತಿಗೆ ಬಿಇಎಲ್ ಕೈಲಿದ್ದು ಈ ಯೋಜನೆಯ ಮುಖ್ಯ ಗುತ್ತಿಗೆದಾರ ಸಂಸ್ಥೆಯೂ ಆಗಿದೆ. ದೀರ್ಘ ವ್ಯಾಪ್ತಿಯ ಭೂಮಿಯಿಂದ ಆಗಸಕ್ಕೆ ಚಿಮ್ಮುವ ಸಾಮರ್ಥ್ಯವುಳ್ಳ ಕ್ಷಿಪಣಿ (ಎಲ್ ಆರ್ ಎಸ್ಎಎಂ) ಬರಾಕ್ 8 ಶ್ರೇಣಿಯ ಭಾಗವಾಗಿದ್ದು, ಇಸ್ರೇಲ್ ನೌಕಾಪಡೆ ಬಳಕೆ ಮಾಡುತ್ತಿರುವ ವಾಯು ಹಾಗೂ ಕ್ಷಿಪಣಿ ರಕ್ಷಣಾ ವ್ಯವಸ್ಥೆಯಾಗಿದೆ.
ಇಸ್ರೇಲ್ ರಕ್ಷಣಾ ಕ್ಷೇತ್ರಕ್ಕೆ ಭಾರತ ಪ್ರಮುಖ ಮಾರುಕಟ್ಟೆಯಾಗಿದ್ದು, ರಕ್ಷಣಾ ಕ್ಷೇತ್ರವಷ್ಟೇ ಅಲ್ಲದೇ ಕೃಷಿ ಕ್ಷೇತ್ರ ತಂತ್ರಜ್ಞಾನ ಕ್ಷೇತ್ರಗಳಲ್ಲೂ ಭಾರತ-ಇಸ್ರೇಲ್ ಸಹಕಾರವನ್ನು ಮತ್ತಷ್ಟು ವೃದ್ಧಿಸಲು ತೀರ್ಮಾನಿಸಿವೆ,
ಕಳೆದ ವರ್ಷ ಐಎಐ ಭಾರತೀಯ ಸೇನಾಪಡೆ ಹಾಗೂ ನೌಕಾಪಡೆಗೆ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಪೂರೈಕೆ ಮಾಡುವ ಸುಮಾರು 2 ಬಿಲಿಯನ್ ಡಾಲರ್ ಮೌಲ್ಯದ ಯೋಜನೆಗೆ ಸಹಿ ಹಾಕಿತ್ತು. ಇದಷ್ಟೇ ಅಲ್ಲದೇ ಬರಾಕ್-8 ಕ್ಷಿಪಣಿ ವ್ಯವಸ್ಥೆಯನ್ನು ಪೂರೈಕೆ ಮಾಡುವುದಕ್ಕೆ ಬಿಇಎಲ್ ನೊಂದಿಗೆ ಸುಮಾರು 630 ಮಿಲಿಯನ್ ಡಾಲರ್ ಮೊತ್ತದ ಯೋಜನೆಗೆ ಸಹಿ ಹಾಕಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics