ನವದೆಹಲಿ: ದೇಶಾದ್ಯಂತ ಭಾರಿ ಸುದ್ದಿಗೆ ಗ್ರಾಸವಾಗಿರುವ ಸಿಬಿಐ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅರುಣ್ ಜೇಟ್ಲಿ ಪ್ರತಿಕ್ರಿಯಿಸಿದ್ದು, ಸೀಝರ್‌ನ ಪತ್ನಿಯಂತೆ ಸಿಬಿಐ ಅಧಿಕಾರಿಗಳು ಶಂಕಾತೀತರಾಗಿರಬೇಕು ಹೇಳಿದ್ದಾರೆ.
ಸಿಬಿಐ ನಿರ್ದೇಶಕ ಅಲೋಕ್ ಕುಮಾರ ವರ್ಮಾ ವಿರುದ್ಧದ ವಿಚಾರಣೆಗೆ ಸರ್ವೋಚ್ಚ ನ್ಯಾಯಾಲಯದ ಆದೇಶ ನೀಡಿದ ಬೆನ್ನಲ್ಲೇ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು ಸುಪ್ರೀಂ ಆದೇಶ 'ಅತ್ಯಂತ ಧನಾತ್ಮಕ ಬೆಳವಣಿಗೆ' ಎಂದು ಬಣ್ಣಿಸಿದ್ದಾರೆ.
'ದೇಶದ ಹಿತಾಸಕ್ತಿಯ ದೃಷ್ಟಿಯಿಂದ ಸತ್ಯವು ಹೊರಗೆ ಬರಬೇಕಿದ್ದು, ನ್ಯಾಯಪರತೆಯನ್ನು ಕಾಯ್ದುಕೊಳ್ಳಲು ಸರ್ವೋಚ್ಚ ನ್ಯಾಯಾಲಯವು ವಿಚಾರಣೆಯ ಉಸ್ತುವಾರಿಗಾಗಿ ನಿವೃತ್ತ ನ್ಯಾಯಾಧೀಶರನ್ನು ನೇಮಕಗೊಳಿಸಿದೆ. ಸಿಬಿಐನ ವೃತ್ತಿಪರತೆ, ವರ್ಚಸ್ಸು ಮತ್ತು ಸಾಂಸ್ಥಿಕ ಅಖಂಡತೆಯನ್ನು ಕಾಯ್ದುಕೊಳ್ಳಲು ಮಾತ್ರ ಸರ್ಕಾರ ಆಸಕ್ತವಾಗಿದೆ ಎಂದು ಹೇಳಿದರು.
ಇದೇ ವೇಳೆ ಸಿಬಿಐ ಅಧಿಕಾರಿಗಳನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡ ಜೇಟ್ಲಿ, 'ಎಲ್ಲ ಸಿಬಿಐ ಅಧಿಕಾರಿಗಳು, ವಿಶೇಷವಾಗಿ ಇಬ್ಬರು ಅಗ್ರ ಅಧಿಕಾರಿಗಳು ಸೀಝರ್ ನ ಪತ್ನಿ ಇದ್ದಂತೆ ಮತ್ತು ಶಂಕಾತೀತರಾಗಿರಬೇಕು. ಇತ್ತೀಚಿನ ಬೆಳವಣಿಗೆಗಳು ಸಿಬಿಐನ ವರ್ಚಸ್ಸನ್ನು ಕುಂದಿಸಿವೆ ಮತ್ತು ಇದೇ ಕಾರಣದಿಂದ ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಕೇಂದ್ರ ಸರ್ಕಾರ ಅವರನ್ನು ರಜೆಯಲ್ಲಿ ಕಳುಹಿಸಿದೆ. ವಿಚಾರಣೆ ಪೂರ್ಣಗೊಳಿಸಲು ಎರಡು ವಾರಗಳ ಗಡುವು ವಿಧಿಸಿರುವ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನವು ತನಿಖೆಯ ನ್ಯಾಯಬದ್ಧ ಮಾನದಂಡವನ್ನು ಇನ್ನಷ್ಟು ಬಲಗೊಳಿಸುತ್ತದೆ ಮತ್ತು ನಿವೃತ್ತ ನ್ಯಾಯಾಧೀಶರ ನೇಮಕವು ನ್ಯಾಯಯುತ ವಿಚಾರಣೆಯನ್ನು ಖಚಿತಗೊಳಿಸುತ್ತದೆ ಎಂದು ಜೇಟ್ಲಿ ಹೇಳಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos