ಚೆನ್ನೈ: ಪತಿ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಪತ್ನಿ ಆತ್ಮಹತ್ಯೆ ಮಾಡಿಕೊಂಡರೆ ಆತನಿಗೆ ಶಿಕ್ಷೆ ನೀಡಲು ಸಾಧ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಆದೇಶ ನೀಡಿದೆ. ಈ ಮೂಲಕ ವ್ಯಕ್ತಿಯೊಬ್ಬನಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದ ಕೆಳ ನ್ಯಾಯಾಲಯದ ತೀರ್ಪನ್ನು ಮದ್ರಾಸ್ ಹೈಕೋರ್ಟ್ ತಳ್ಳಿ ಹಾಕಿದೆ.
ಪತಿಯ ಅನೈತಿಕ ಸಂಬಂಧ ಸೆಕ್ಷನ್ 498-ಎ(ಪತಿ ಅಥವಾ ಪತಿಯ ಸಂಬಂಧಿಕರು ಕ್ರೂರವಾಗಿರುತ್ತಾರೆ) ಕಾಯ್ದೆಯಡಿ ಕ್ರೂರತ್ವ ಎಂಬ ಅಂಶದಡಿ ಬರುವುದಿಲ್ಲ. ಪತ್ನಿಯ ಆತ್ಮಹತ್ಯೆಗೆ ಸರಿಯಾದ ಕಾರಣ, ಸಾಕ್ಷಿಗಳಿಲ್ಲದೆ ಪತಿ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಎಸ್ ವೈದ್ಯನಾಥನ್ ಹೇಳಿದ್ದಾರೆ.
ಇತ್ತೀಚೆಗೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ತನ್ನನ್ನು ಸ್ಥಳೀಯ ನ್ಯಾಯಾಲಯ ಅಪರಾಧಿ ಎಂದು ಘೋಷಿಸಿ ಶಿಕ್ಷೆ ನೀಡಿದ್ದನ್ನು ಪ್ರಶ್ನಿಸಿ ಸೇಲಂನ ಮಣಿಕ್ಕಮ್ ಎಂಬಾತ ಹೈಕೋರ್ಟ್ ಮೊರೆ ಹೋಗಿದ್ದ. ಭಾರತೀಯ ದಂಡ ಸಂಹಿತೆ ಸೆಕ್ಷನ್ 306ರಡಿ ಪತಿಗೆ ಅನೈತಿಕ ಸಂಬಂಧವಿದೆ ಎಂಬ ಮಾತ್ರಕ್ಕೆ ಪತ್ನಿಯ ಆತ್ಮಹತ್ಯೆಗೆ ಆತ ಪ್ರಚೋದನೆ, ಪ್ರೇರಣೆ ನೀಡಿದ್ದನು ಎಂದು ಹೇಳಲು ಸಾಧ್ಯವಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಸೆಕ್ಷನ್ 498-ಎಯಡಿ ಅನೈತಿಕ ಸಂಬಂಧ ಕೇಸು ದಾಖಲಿಸಿದರೂ ಕೂಡ ಪತ್ನಿ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಆತನೇ ಕಾರಣ, ಆತನ ಮಾನಸಿಕ ಕಿರುಕುಳ ಕಾರಣ ಎಂದು ಬಲವಾದ ಸಾಕ್ಷಿ ನೀಡಲು ಸಾಧ್ಯವಾಗುವುದಿಲ್ಲ ಎಂದು ನ್ಯಾಯಾಧೀಶರು ಹೇಳಿದರು.
ತನ್ನ ಪತಿ ಬೇರೊಬ್ಬ ಹೆಂಗಸಿನ ಜೊತೆ ಅನೈತಿಕ ಸಂಬಂಧ ಹೊಂದಿದ್ದರಿಂದ ಬೇಸತ್ತು ಮಣಿಕ್ಕಮ್ ಪತ್ನಿ ತನ್ನ 18 ತಿಂಗಳ ಮಗುವಿನ ಜೊತೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು.