ದೇಶ

ಉದ್ಘಾಟನೆಗೂ ಮೊದಲೇ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಅಮಿತ್ ಶಾ ಲ್ಯಾಂಡಿಂಗ್ : ವಿವಾದ ಸ್ಪೋಟ

Nagaraja AB

ಕಣ್ಣೂರು : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ  ಉದ್ಘಾಟನೆಗೂ ಮೊದಲು ಕೇರಳದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೊದಲ ಪ್ರಯಾಣಿಕರಾಗಿದ್ದಾರೆ. ಇದು ಇದೀಗ ವಿವಾದವಾಗಿ ಮಾರ್ಪಟ್ಟಿದೆ.

ಕೇರಳದ ಎಲ್ ಡಿಎಫ್  ಸರ್ಕಾರವನ್ನು ವಜಾಗೊಳಿಸುವಂತೆ ಬೆದರಿಕೆ ಹಾಕಿದ್ದರೂ ರಾಜ್ಯದ ಶಿಷ್ಟಾಚಾರದಂತೆ    ಅಮಿತ್ ಶಾ ಅವರಿಗೆ  ಉದ್ಘಾಟನೆಗೂ ಮೊದಲೇ ಕಣ್ಣೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯಲು  ಅವಕಾಶ ಮಾಡಿಕೊಡಲಾಗಿದೆ ಎಂದು  ಕೇರಳ ರಾಜ್ಯ ಹಣಕಾಸು  ಸಚಿವ ಟಿ.ಎಂ. ಥಾಮಸ್ ಐಸಾಕ್   ಹೇಳಿದ್ದಾರೆ.

 ಕೇರಳದ ನಾಲ್ಕನೇ ವಿಮಾನ ನಿಲ್ದಾಣವಾಗಿರುವ ಕಣ್ಣೂರು ವಿಮಾನ ನಿಲ್ದಾಣ ಉದ್ಘಾಟನೆ ಡಿಸೆಂಬರ್ 9 ರಂದು ನಿಗದಿಯಾಗಿದೆ.ಆದರೆ, ಪೂರ್ವ ನಿಗದಿತ ಕಾರ್ಯಕ್ರಮದಂತೆ ವಿಶೇಷ ವಿಮಾನದಲ್ಲಿ ಅಮಿತ್ ಶಾ ಆಗಮಿಸುವ ಮೂಲಕ ಮೊದಲ ಪ್ರಯಾಣಿಕರಾಗಿದ್ದಾರೆ.

ಕೇರಳಕ್ಕೆ ಒಂದು ದಿನದ ಭೇಟಿ ನೀಡಿದ್ದ ಅಮಿತ್ ಶಾ ಅವರಿಗೆ ಕಣ್ಣೂರು ವಿಮಾನ ನಿಲ್ದಾಣದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರಿಂದ ಸ್ವಾಗತಿಸಲಾಗಿತ್ತು. ತಲೈಕಾವು ಬಳಿ ಪಕ್ಷದ ಕಚೇರಿ ಉದ್ಘಾಟಿಸಿದ ಬಳಿಕ ಶಬರಿಮಲೆ ದೇಗುಲ ವಿಚಾರದಲ್ಲಿ  ಸಿಪಿಐಎಂ- ನೇತೃತ್ವದ ಎಲ್ ಡಿಎಫ್ ಸರ್ಕಾರದ ವಿರುದ್ಧ ಅಮಿತ್ ಶಾ ವಾಗ್ದಾಳಿ ನಡೆಸಿದ್ದರು.

ಅಮಿತ್ ಶಾ ವಿಮಾನ ನಿಲ್ದಾಣ ಬಳಸಲು ಅವಕಾಶ ಮಾಡಿಕೊಟ್ಟ ಎಲ್ ಡಿಎಫ್ ಸರ್ಕಾರದ ವಿರುದ್ಧ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಹಾಗೂ ಅಮಿತ್ ಶಾ ನಡುವಿನ ಒಳ ಒಪ್ಪಂದದಂತೆ  ಕಣ್ಣೂರು ವಿಮಾನ ನಿಲ್ದಾಣ ಬಳಸಲು ಅವಕಾಶ ಮಾಡಿಕೊಡಲಾಗಿದೆ ಎಂದು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ. ರಾಮಚಂದ್ರನ್ ಆರೋಪಿಸಿದ್ದಾರೆ.

ಡಿಸೆಂಬರ್ 9 ರಂದು ಉದ್ಘಾಟನೆಯಾಗಬೇಕಾದರೂ ಅಮಿತ್ ಶಾ ಅವರಿಗೆ ವಿಶೇಷವಾಗಿ ಉದ್ಘಾಟಿಸಲಾಗಿದೆ. ತುರ್ತು ಪರಿಸ್ಥಿತಿ ಎಂಬಂತೆ ಅಮಿತ್ ಶಾ ಅವರಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಅವರು ಹೇಳಿದ್ದಾರೆ.

SCROLL FOR NEXT