ದಂತೇವಾಡ: ಛತ್ತೀಸ್ಗಢದಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದು, ನಕ್ಸಲರು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಪೊಲೀಸರು ಹುತಾತ್ಮರಾಗಿ ದೂರದರ್ಶನದ ಕ್ಯಾಮೆರಾಮೆನ್ ಒಬ್ಬರು ಮೃತಪಟ್ಟಿರುವ ಘಟನೆ ಅರಣ್ ಪುರದ ನೀಲವಾ ಪ್ರದೇಶದಲ್ಲಿ ಮಂಗಳವಾರ ನಡೆದಿದೆ.
ಅರಣ್ ಪುರದಲ್ಲಿ ನಕ್ಸಲರ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದರು. ಈ ವೇಳೆ ನಕ್ಸಲರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ಎನ್'ಕೌಂಟರ್ ನಲ್ಲಿ ಇಬ್ಬರು ಪೊಲೀಸರು ಹಾಗೂ ದೂರದರ್ಶನದ ಕ್ಯಾಮೆರಾಮೆನ್ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.
ಮೃತಪಟ್ಟವರನ್ನು ಸಬ್ ಇನ್ಸ್ ಪೆಕ್ಟರ್ ರುದ್ರ ಪ್ರತಾಪ್, ಸಹಾಯಕ ಪೇತದೆ ಮಂಗಲು ಮತ್ತು ದೂರದರ್ಶನದ ಕ್ಯಾಮೆರಾಮೆನ್ ಅಚ್ಯುತಾನಂದ್ ಎಂದು ಗುರ್ತಿಸಲಾಗಿದೆ.
ಎಂದಿನಂತೆ ಇಂದು ಬೆಳಗ್ಗೆ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿದ್ದವು. ಭದ್ರತಾ ಪಡೆಗಳೊಂದಿಗೆ ದೂರದರ್ಶನ ಕ್ಯಾಮೆರಾಮೆನ್ ಕೂಡ ತೆರಳಿದ್ದರು. ನಕ್ಸಲರಿದ್ದ ಸ್ಥಳದತ್ತ ತೆರಳುತ್ತಿದ್ದಂತೆಯೇ ನಕ್ಸಲರು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆಂದು ತಿಳಿದುಬಂದಿದೆ.
ಚುನಾವಣಾ ವರದಿ ಮಾಡುವ ಸಲುವಾಗಿ ದೂರದರ್ಶನದ ಮೂವರು ಸದಸ್ಯರ ತಂಡ ದೆಹಲಿಯಿಂದ ಛತ್ತೀಸ್ಗಢಕ್ಕೆ ಬಂದಿತ್ತು ಎಂದು ದಂತೇವಾಡ ಪೊಲೀಸ್ ಅಧಿಕಾರಿ ಅಭಿಷೇಕ್ ಪಲ್ಲವ್ ಅವರು ಹೇಳಿದ್ದಾರೆ. ಮೃತಪಟ್ಟ ಕ್ಯಾಮೆರಾಮೆರ್ ಅಚ್ಯುತಾನಂದ ಸಾಹೂ ಒಡಿಶಾದ ಬದ್ಗದ್ ಜಿಲ್ಲೆಯ ನಿವಾಸಿಯಾಗಿದ್ದರು.
ಘಟನೆಗೆ ಪ್ರಸಾರ ಭಾರತಿ ತೀವ್ರ ಸಂತಾಪವನ್ನು ಸೂಚಿಸಿದೆ. ಇಂತಹ ಕಠಿಣ ಪರಿಸ್ಥಿತಿಯನ್ನು ಎದುರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇವೆಂದು ಹೇಳಿದೆ.
ಘಟನೆಯಲ್ಲಿ ಮತ್ತಿಬ್ಬರು ಭದ್ರತಾ ಸಿಬ್ಬಂದಿಗಳು ಗಂಭೀರವಾಗಿ ಗಾಯಗೊಂಡಿದ್ದು, ಸ್ತಳದಲ್ಲಿ ಕಾರ್ಯಾಚರಣೆ ಮುಂದುವರೆದಿದೆ ಎಂದು ತಿಳಿದುಬಂದಿದೆ.