ನವದೆಹಲಿ: ಗಂಡು ಮತ್ತು ಹೆಣ್ಣಿಗೆ ಮದುವೆಯ ಕನಿಷ್ಠ ವಯಸ್ಸಿನ ವಿಚಾರದಲ್ಲಿ ಯಾವುದೇ ತಾರತಮ್ಯ ಇರಬಾರದು. ಗಂಡಿಗೆ ಮದುವೆಯ ಕನಿಷ್ಠ ವಯಸ್ಸನ್ನು ಈಗಿನ 21 ವರ್ಷದಿಂದ 18ಕ್ಕೆ ಇಳಿಸಬೇಕು ಎಂದು ಕಾನೂನು ಆಯೋಗ ಶಿಫಾರಸು ಮಾಡಿದೆ ಎಂದು ತಿಳಿದುಬಂದಿದೆ.
ಏಕರೂಪ ನಾಗರಿಕ ಸಂಹಿತೆ ವಿಚಾರವಾಗಿ ನಡೆದ ಸಭೆಯಲ್ಲಿ ಈ ಬಗ್ಗೆ ಕಾನೂನು ಆಯೋಗ ಸಮಗ್ರ ಸಮಾಲೋಚನೆ ನಡೆಸಿದ್ದು, ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿದ ಪೂರ್ಣ ಪ್ರಮಾಣದ ವರದಿಯನ್ನು ಸಿದ್ಧಪಡಿಸುವ ಬದಲು ಕಾನೂನು ಆಯೋಗವು ಸಮಾಲೋಚನಾ ಪತ್ರವನ್ನು ಬಿಡುಗಡೆ ಮಾಡಿದೆ. 'ಕಲಹರಹಿತ' ವಿಚ್ಛೇದನ, ಜೀವನಾಂಶ, ಮದುವೆಗೆ ಒಪ್ಪಿಗೆ ಕೊಡುವ ವಯಸ್ಸಿಗೆ ಸಂಬಂಧಿಸಿದ ಅಸಮಾನತೆಯಂತಹ ವಿಚಾರಗಳನ್ನು ಈ ಸಮಾಲೋಚನಾ ಪತ್ರವು ಚರ್ಚೆಗೆ ಎತ್ತಿಕೊಂಡಿದ್ದು, 'ಪ್ರಬುದ್ಧತೆಗೆ ಸಾರ್ವತ್ರಿಕವಾಗಿ ಒಂದು ವಯಸ್ಸನ್ನು ಗುರುತಿಸಲಾಗುತ್ತಿದೆ. ಈ ವಯಸ್ಸಿನ ಜನರಿಗೆ ಸರ್ಕಾರವನ್ನು ಆಯ್ಕೆ ಮಾಡುವ ಹಕ್ಕು ಇದೆ. ಹೀಗಿರುವಾಗ ಈ ವಯಸ್ಸಿನಲ್ಲಿ ಅವರಿಗೆ ಬೇಕಾದ ತಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕನ್ನೂ ನೀಡಬೇಕು' ಆಯೋಗವು ಶಿಫಾರಸು ಮಾಡಿದೆ.
1875ರ ಭಾರತೀಯ ಪ್ರಬುದ್ಧತೆ ಕಾಯ್ದೆಯಲ್ಲಿ ಹೇಳಿದಂತೆ, ಹೆಣ್ಣು ಮತ್ತು ಗಂಡಿಗೆ ಮದುವೆಗೆ ಅರ್ಹತೆಯ ಕನಿಷ್ಠ ವಯಸ್ಸು 18 ವರ್ಷ ಎಂದು ಗುರುತಿಸಬೇಕು ಎಂದು ಆಯೋಗ ಅಭಿಪ್ರಾಯಪಟ್ಟಿದೆ. ಗಂಡ ಮತ್ತು ಹೆಂಡತಿಯ ನಡುವಣ ವಯಸ್ಸಿನಲ್ಲಿ ವ್ಯತ್ಯಾಸ ಇರಬೇಕು ಎಂಬ ಯೋಚನೆಗೆ ಕಾನೂನಿನಲ್ಲಿ ಯಾವ ಜಾಗವೂ ಇಲ್ಲ. ಇಲ್ಲಿ ಎಲ್ಲರೂ ಸಮಾನರು ಮತ್ತು ವಿವಾಹ ಸಂಬಂಧದಲ್ಲಿ ಗಂಡು ಮತ್ತು ಹೆಣ್ಣು ಸಮಾನವಾಗಿರಬೇಕು ಎಂದು ಸಮಾಲೋಚನಾ ಪತ್ರದಲ್ಲಿ ಹೇಳಲಾಗಿದೆ. ಹೆಂಡತಿಯ ವಯಸ್ಸು ಗಂಡನ ವಯಸ್ಸಿಗಿಂತ ಕಡಿಮೆ ಇರಬೇಕು ಎಂಬ ಸಿದ್ಧ ಮಾದರಿ ಇದೆ. ಹೆಣ್ಣಿಗೆ 18 ವರ್ಷ ಮತ್ತು ಗಂಡಿಗೆ 21 ವರ್ಷ ಮದುವೆಯ ಕನಿಷ್ಠ ವಯಸ್ಸು ಎಂಬ ನಿಯಮವು ಈ ಸಿದ್ಧಮಾದರಿಗೆ ಪೂರಕವಾಗಿಯೇ ಕೆಲಸ ಮಾಡುತ್ತದೆ ಎಂದೂ ಮತ್ತೊಂದು ಕಡೆ ಆಯೋಗ ಹೇಳಿದೆ.
ಇದೇ ಸಭೆಯಲ್ಲಿ ಆಯೋಗವು ಮುಸ್ಲಿಂ ಮದುವೆ ಕಾಯ್ದೆ 1939ರ ಕುರಿತೂ ಚರ್ಚೆ ನಡೆಸಿದ್ದು, ವಿವಾಹ ಮತ್ತು ವಿಚ್ಚೇದನಕ್ಕೆ ಸಂಬಂಧಸಿದ ಕಾನೂನಿನ ತಿದ್ದುಪಡಿಯಾಗಬೇಕು ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೆ ಮದುವೆಯಾದ ಅಪ್ರಾಪ್ತ ದಂಪತಿಗಳ ಮೇಲೆ ಗಂಡಿನ ಪೋಷಕರು ಮತ್ತು ಹೆಣ್ಣಿನ ಪೋಷಕರು ಸಮಾನ ಹಕ್ಕು ಹೊಂದಿರುತ್ತಾರೆ. ಇನ್ನು ಸಂತ್ರಸ್ತರನ್ನು ವಶಕ್ಕೆ ನೀಡುವಾಗ ತಂದೆಗೆ ಮೊದಲ ಪ್ರಾಶಸ್ತ್ಯ ನೀಡುವ ಕುರಿತು ಆಯೋಗ ಸಲಹೆ ನೀಡಿದೆ ಎನ್ನಲಾಗಿದೆ.
ಏಕರೂಪ ನಾಗರಿಕ ಸಂಹಿತೆ ಅನಗತ್ಯ
ಇದೇ ವೇಳೆ ಏಕರೂಪ ನಾಗರಿಕ ಸಂಹಿತೆಯನ್ನು ಪ್ರಶ್ನಿಸಿರುವ ಕಾನೂನು ಆಯೋಗ ಇದರ ಯಾವುದೇ ಅಗತ್ಯವೂ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಕಾನೂನು ಆಯೋಗದ ಅವಧಿಯು ಶುಕ್ರವಾರಕ್ಕೆ ಕೊನೆಗೊಂಡಿದ್ದು, ಪೂರ್ಣ ಪ್ರಮಾಣದ ವರದಿಗೆ ಸಮಯ ದೊರೆಯದ ಕಾರಣ ಆಯೋಗವು ಸಮಾಲೋಚನಾ ಪತ್ರವನ್ನು ಸಿದ್ಧಪಡಿಸಿದೆ ಎನ್ನಲಾಗಿದೆ. ಹಾಗಾಗಿ ಮುಂದಿನ ಕಾನೂನು ಆಯೋಗವು ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ವರದಿ ಸಿದ್ಧಪಡಿಸಬೇಕಿದೆ.
ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿ ಪೂರ್ಣ ಪ್ರಮಾಣದ ವರದಿಯ ಬದಲಿಗೆ ವೈಯಕ್ತಿಕ ಕಾನೂನುಗಳಲ್ಲಿ ಕೆಲವು ಬದಲಾವಣೆಗಳನ್ನು ಮಾತ್ರ ಶಿಫಾರಸು ಮಾಡಲಾಗುವುದು ಎಂದು ಆಯೋಗದ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಬಲ್ಬೀರ್ ಸಿಂಗ್ ಚೌವ್ಹಾಣ್ ಈ ಹಿಂದೆಯೇ ಹೇಳಿದ್ದರು. ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿ ಪರಿಶೀಲನೆ ನಡೆಸುವಂತೆ ಆಯೋಗಕ್ಕೆ 2016ರ ಜೂನ್ 17ರಂದು ಕೇಂದ್ರ ಸರ್ಕಾರ ಸೂಚಿಸಿತ್ತು. ಇದು ದೇಶದಾದ್ಯಂತ ಭಾರಿ ಚರ್ಚೆಗೆ ಅವಕಾಶ ಕೊಟ್ಟಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos