ನವದೆಹಲಿ: ಎನ್ ಡಿಎ ಸರ್ಕಾರದ ರಾಫೆಲ್ ಯುದ್ಧ ವಿಮಾನ ಒಪ್ಪಂದ ಬಗ್ಗೆ ಕಾಂಗ್ರೆಸ್ ಅಪಸ್ವರ ಎತ್ತುತ್ತಿರುವ ಸಂದರ್ಭದಲ್ಲಿ, ಕೇಂದ್ರ ಸಚಿವ ಅರುಣ್ ಜೇಟ್ಲಿಯವರು ಮುಂದಿಟ್ಟಿರುವ 15 ಪ್ರಶ್ನೆಗಳಿಗೆ ಕಾಂಗ್ರೆಸ್ ನಾಯಕರು ಏಕೆ ಉತ್ತರ ಕೊಟ್ಟಿಲ್ಲ ಎಂದು ಬಿಜೆಪಿ ಪ್ರಶ್ನೆ ಮಾಡಿದೆ.
ಯುಪಿಎ ಸರ್ಕಾರದ ಜಡ್ಡುಗಟ್ಟಿದ ನೀತಿಯಿಂದಾಗಿ ಹಿಂದಿನ ಸರ್ಕಾರಕ್ಕೆ ರಕ್ಷಣಾ ಇಲಾಖೆ ಅಂದಾಜು ಮಾಡಿದ ವೆಚ್ಚದಲ್ಲಿ ರಾಫೆಲ್ ಒಪ್ಪಂದವನ್ನು ಮುಗಿಸಲು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಹಲವು ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಯಾನವನ್ನು ಕೂಡ ಕೈಗೊಂಡಿದ್ದು 15 ಪ್ರಶ್ನೆಗಳನ್ನು ಕಾಂಗ್ರೆಸ್ ಮುಂದಿಟ್ಟಿದ್ದೇವೆ, ಆದರೆ ಈವರೆಗೆ ಯಾವೊಬ್ಬ ನಾಯಕರೂ ಉತ್ತರ ನೀಡಿಲ್ಲ, ಮೌನವಾಗಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.
ರಾಫೆಲ್ ಯುದ್ಧ ವಿಮಾನ ಒಪ್ಪಂದದಲ್ಲಿ ಎನ್ ಡಿಎ ಸರ್ಕಾರ ಹಲವು ಉದ್ಯಮಿಗಳ ಪರವಾಗಿ ಒಪ್ಪಂದ ಮಾಡಿಕೊಂಡಿದ್ದು ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್ ನಾಯಕರು ಈ ವಿಷಯವನ್ನು ಎಲ್ಲಾ ರಾಜ್ಯಗಳಿಗೆ ಕೊಂಡೊಯ್ಯಲು ಮುಂದಾಗಿದೆ. ಮುಂಬರುವ ದಿನಗಳಲ್ಲಿ ನಾಲ್ಕು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಇದನ್ನು ಹತ್ತಿಕ್ಕಲು ಬಿಜೆಪಿ ಪ್ರಯತ್ನಿಸುತ್ತಿದೆ.
ಯುಪಿಎ ಸರ್ಕಾರದ ಆಡಳಿತಾವಧಿಯಲ್ಲಿ ಚಾಲನೆ ಸಿಗದ ಜಡ್ಡುಗಟ್ಟಿದ ನೀತಿಯನ್ನು ದೇಶದ ಜನತೆಯ ಮುಂದಿಟ್ಟು ಕಾಂಗ್ರೆಸ್ ನ್ನು ಹತ್ತಿಕ್ಕಲು ನೋಡುತ್ತಿದೆ.