ದೇಶ

ಸಾವಿನ ಮಳೆ, ಪ್ರವಾಹಕ್ಕೆ ನಲುಗಿದ ಕೇರಳ: 1 ವರ್ಷಗಳ ಎಲ್ಲಾ ಅಧಿಕೃತ ಆಚರಣೆ ರದ್ದುಗೊಳಿಸಿದ ಸರ್ಕಾರ

Manjula VN
ತಿರುವನಂತಪುರ: ಸಾವಿನ ಮಳೆ ಹಾಗೂ ಭೀಕರ ಪ್ರವಾಹದಿಂದ ತತ್ತರಿಸಿ ಹೋಗಿರುವ ಕೇರಳ ರಾಜ್ಯ, ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದು, ಈ ಹಿನ್ನಲೆಯಲ್ಲಿ 1 ವರ್ಷಗಳ ಕಾಲ ಎಲ್ಲಾ ರೀತಿಯ ಆಚರಣೆ, ಕಾರ್ಯಕ್ರಮಗಳನ್ನು ರದ್ದುಗೊಳಿಸುವುದಾಗಿ ಕೇರಳ ಸರ್ಕಾರ ಮಂಗಳವಾರ ಘೋಷಣೆ ಮಾಡಿದೆ. 
ಈ ಕುರಿತಂತೆ ಹೇಳಿಕೆ ಬಿಡುಗಡೆ ಮಾಡಿರುವ ಕೇರಳ ಸರ್ಕಾರ, ಪ್ರವಾಸದಿಂದ ಕೇರಳ ರಾಜ್ಯ ನಲುಗಿ ಹೋಗಿದ್ದು, ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ದೊಡ್ಡ ಮೊತ್ತದ ಯಾವುದೇ ಕಾರ್ಯಕ್ರಮಗಳನ್ನು 1 ವರ್ಷಗಳ ಕಾಲ ಆಯೋಜಿಸುವುದಿಲ್ಲ. ಈ ಕಾರ್ಯಕ್ರಮಗಳಿಗೆ ಖರ್ಚು ಮಾಡಿರುವ ಹಣವನ್ನು ಪ್ರವಾಹ ನೆರವಿಗೆ ಬಳಸಿಕೊಳ್ಳಲಾಗುತ್ತದೆ ಎಂದು ತಿಳಿಸಿದೆ. 
ಪ್ರವಾಹದಿಂದಾಗಿ ಕೇರಳ ರಾಜ್ಯ ರೂ.30,000 ಕೋಟಿ ನಷ್ಟವನ್ನು ಅನುಭವಿಸಿದೆ. ಹೀಗಾಗಿ ಸರ್ಕಾರದ ಯಾವುದೇ ಇಲಾಖೆಯೂ ಮುಂದಿನ ಒಂದು ವರ್ಷಗಳ ಕಾಲ ಯಾವುದೇ ಆಚರಣೆ ಹಾಗೂ ಕಾರ್ಯಕ್ರಮಗಳನ್ನು ಆಯೋಜಿಸುವುದಿಲ್ಲ. ಕಾರ್ಯಕ್ರಮಗಳನ್ನು ರದ್ದು ಮಾಡಿದ ಹಣವನ್ನು ಮುಖ್ಯಮಂತ್ರಿ ನೆರವು ಪರಿಹಾರ ನಿಧಿಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಕೇರಳ ರಾಜ್ಯದಲ್ಲಿ ಪ್ರತೀ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಅಂತರಾಷ್ಟ್ರೀಯ ಸಿನಿಮೋತ್ಸವವನ್ನು ಆಯೋಜಿಸಲಾಗುತ್ತದೆ. ಇಲ್ಲದೆ, ರಾಜ್ಯ ಶಾಲೆ ಯುವ ಹಬ್ಬವನ್ನೂ ದೊಡ್ಡ ಮಟ್ಟದಲ್ಲಿ ಆಯೋಜಿಸಲಾಗುತ್ತದೆ. ಪ್ರಸ್ತುತ ಸರ್ಕಾರ ಎಲ್ಲಾ ಅಧಿಕೃತ ಆಚರಣೆಗಳನ್ನು ರದ್ದು ಮಾಡಿರುವ ಹಿನ್ನಲೆಯಲ್ಲಿ ಈ ಕಾರ್ಯಕ್ರಮಗಳೂ ಕೂಡ ರದ್ದುಗೊಳ್ಳಲಿದೆ ಎಂದು ತಿಳಿದುಬಂದಿದೆ. 
ಪ್ರವಾಹದಿಂದ ತತ್ತರಿಸಿ ಹೋಗಿರುವ ಕೇರಳ ರಾಜ್ಯಕ್ಕೆ ನಿನ್ನೆಯವರೆಗೂ ರೂ.1,036 ಕೋಟಿ ತಲುಪಿದೆ. ಕೇರಳ ಸಚಿವರು ಇತರೆ 14 ರಾಷ್ಟ್ರಗಳಿಗೆ ಶೀಘ್ರದಲ್ಲಿಯೇ ಭೇಟಿ ನೀಡಲಿದ್ದು, ರಾಜ್ಯದ ಜನತೆಗೆ ಸಹಾಯ ಹಸ್ತ ಚಾಚುವಂತೆ ಮನವಿ ಮಾಡಿಕೊಳ್ಳಲಿದ್ದಾರೆಂದು ವರದಿಗಳುತ ತಿಳಿಸಿವೆ.
SCROLL FOR NEXT