ದೇಶ

ಜಾಗತಿಕ ಮೊಬಿಲಿಟಿ ಶೃಂಗಸಭೆ: ಉತ್ತಮ ಸಂಚಾರ ವ್ಯವಸ್ಥೆಗೆ 7 'ಸಿ' ಸೂತ್ರ ಮುಂದಿಟ್ಟ ಪ್ರಧಾನಿ ಮೋದಿ

Lingaraj Badiger
ನವದೆಹಲಿ: ವಿದ್ಯುತ್ ಚಾಲಿತ ವಾಹನಗಳ ನಿರ್ಮಾಣಕ್ಕೆ ಹೂಡಿಕೆಯನ್ನು ಆಕರ್ಷಿಸುವ, ಮಾಲಿನ್ಯ ನಿಯಂತ್ರಣ ಹಾಗೂ ಸಂಚಾರ ದಟ್ಟಣೆ ನಿಯಂತ್ರಣ ಕುರಿತ ಜಾಗತಿಕ ಮೊಬಿಲಿಟಿ ಶೃಂಗಸಭೆ(MOVE)ಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಚಾಲನೆ ನೀಡಿದ್ದಾರೆ.
ನೀತಿ ಆಯೋಗ ಆಯೋಜಿಸಿರುವ ಎರಡು ದಿನದ ಜಾಗತಿಕ ಮಟ್ಟದ ಶೃಂಗಸಭೆಯನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ, ಸಂಚಾರ ದಟ್ಟಣೆ ಆರ್ಥಿಕ ಮತ್ತು ಪರಿಸರದ ಮೇಲೂ ಪರಿಣಾಮ ಬೀರುತ್ತಿದ್ದು, ಸಂಚಾರ ದಟ್ಟಣೆ ಮುಕ್ತ ಚಲನಶೀಲತೆ ಮುಖ್ಯವಾಗಿದೆ ಎಂದರು.
ಭಾರತ ಅತ್ಯಂತ ವೇಗವಾಗಿ ಆರ್ಥಿಕ ಅಭಿವೃದ್ಧಿ ಹೊಂದುತ್ತಿರುವ ದೇಶ. ದೇಶದಲ್ಲಿ 100 ಸ್ಮಾರ್ಟ್ ಸಿಟಿಗಳನ್ನು ನಿರ್ಮಿಸಲಾಗುತ್ತಿದ್ದು, ರಸ್ತೆ, ವಿಮಾನ ನಿಲ್ದಾಣ, ರೈಲು ಲೈನ್ ಮತ್ತು ಬಂದರುಗಳು ನಿರ್ಮಾಣವಾಗುತ್ತಿವೆ ಎಂದರು.
ಎರಡು ದಿನಗಳ ಈ ಶೃಂಗಸಭೆಯ ಪ್ರಮುಖ ಉದ್ದೇಶ ಭಾರತೀಯ ನಗರಗಳು ಮಾಲಿನ್ಯ ಮುಕ್ತವಾಗಬೇಕು ಎಂದ ಪ್ರಧಾನಿ, ಉತ್ತಮ ಸಂಚಾರ ವ್ಯವಸ್ಥೆಗೆ ಏಳು 'C' ಸೂತ್ರ ಮುಂದಿಟ್ಟರು. 
Common(ಸಾಮಾನ್ಯ ಸಂಚಾರ), Connected (ಸಂಪರ್ಕ), Convenient (ಸುಗಮ), Congestion-free (ದಟ್ಟಣೆ ರಹಿತ), Charged (ಮರುಬಳಕೆ ಮಾಡಬಹುದಾದ), Clean (ಸ್ವಚ್ಛ), Cutting-edge(ಕೊರತೆ ಇಲ್ಲದ) ಸಂಚಾರ ವ್ಯವಸ್ಥೆ ಬೇಕಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 
ಉತ್ತಮ ಸಂಚಾರ ವ್ಯವಸ್ಥೆ ಮೂಲಸೌಕರ್ಯ ಅಭಿವೃದ್ಧಿಗೆ ಸಹಾಯಕವಾಗುತ್ತದೆ. ಸಂಚಾರ ವ್ಯವಸ್ಥೆ ಉತ್ತಮವಾಗಿದ್ದರೆ ಜೀವನ ಶೈಲಿ ಸುಧಾರಣೆಗೆ ಅನುಕೂಲ. ಹೀಗಾಗಿ ವಿದ್ಯುತ್ ಚಾಲಿತ ವಾಹನಗಳು ಮುಂದಿನ ಪೀಳಿಗೆಯ ಸಂಚಾರ ಸಾಧನಗಳಾಗಬೇಕು ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು.
ಶೃಂಗಸಭೆಯಲ್ಲಿ ಭಾಗವಹಿಸಿದ್ದ ಹಲವು ತಜ್ಞರು ವಾಯು ಮಾಲಿನ್ಯ ನಿಯಂತ್ರಣಕ್ಕೆ ತಮ್ಮ ಯೋಜನೆಗಳನ್ನು ಸಭೆಯಲ್ಲಿ ಹಂಚಿಕೊಳ್ಳಲಿದ್ದಾರೆ.
SCROLL FOR NEXT