ದೇಶ

ತೆಲಂಗಾಣ ವಿಧಾನಸಭೆಗೆ ಶೀಘ್ರ ಚುನಾವಣೆ, ಹಂಗಾಮಿ ಸರ್ಕಾರ ಮುಂದುವರಿಯುವಂತಿಲ್ಲ: ರಾವತ್

Lingaraj Badiger
ನವದೆಹಲಿ: ತೆಲಂಗಾಣ ವಿಧಾನಸಭೆಗೆ ಶೀಘ್ರ ಚುನಾವಣೆ ನಡೆಯಲಿದೆ ಮತ್ತು ಹಂಗಾಮಿ ಸರ್ಕಾರ ಮುಂದುವರೆಯುವಂತಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ಒ ಪಿ ರಾವತ್ ಅವರು ಶುಕ್ರವಾರ ಹೇಳಿದ್ದಾರೆ. ಈ ಮೂಲಕ ಡಿಸೆಂಬರ್ ನಲ್ಲಿ ಇತರೆ ನಾಲ್ಕು ರಾಜ್ಯಗಳೊಂದಿಗೆ ತೆಲಂಗಾಣ ವಿಧಾನಸಭೆ ಚುನಾವಣೆ ನಡೆಸುವ ಸೂಚನೆ ನೀಡಿದ್ದಾರೆ.
ಆದಾಗ್ಯೂ, ಹೆಚ್ಚಿನ ರಾಜ್ಯಗಳು ಅವಧಿಗೂ ಮುನ್ನವೇ ಚುನಾವಣೆ ಎದುರಿಸಲು ನಿರ್ಧರಿಸಿದರೆ ಚುನಾವಣಾ ಬೃಹತ್ ಪ್ರಕ್ರಿಯೆಗೆ ತೊಂದರೆಯಾಗುತ್ತದೆ ಎಂದು ರಾವತ್ ಹೇಳಿದ್ದಾರೆ.
ವಿಧಾನಸಭೆ ವಿಸರ್ಜನೆಯಾದರೆ ಮೊದಲು ಚುನಾವಣೆ ನಡೆಸಬೇಕು. ಏಕೆಂದರೆ ಹಂಗಾಮಿ ಸರ್ಕಾರ ಮುಂದುವರೆಯುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶ ಇದೆ. ವಿಧಾನಸಭೆ ವಿಸರ್ಜಿಸಿ ಆರು ತಿಂಗಳು ಹಂಗಾಮಿ ಸರ್ಕಾರ ನಡೆಸಲು ಅವಕಾಶ ಇಲ್ಲ ಎಂದು ರಾವತ್ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಡಿಸೆಂಬರ್ ನಲ್ಲಿ ಮಧ್ಯ ಪ್ರದೇಶ, ರಾಜಸ್ಥಾನ, ಛತ್ತೀಸ್ ಗಢ ಮತ್ತು ಮಿಜೋರಾಂ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಕೇಂದ್ರ ಚುನಾವಣಾ ಆಯೋಗ ಆ ನಾಲ್ಕು ರಾಜ್ಯಗಳೊಂದಿಗೆ ತೆಲಂಗಾಣ ವಿಧಾನಸಭೆ ಚುನಾವಣೆ ನಡೆಸುವ ಸಾಧ್ಯತೆ ಇದೆ.
SCROLL FOR NEXT