ದೇಶ

ಸಂವಿಧಾನ ವಿಧಿ 370ನ್ನು ರದ್ದುಪಡಿಸಿದರೆ, ಭಾರತದೊಂದಿಗಿನ ಸಂಬಂಧ ರದ್ದು; ಮೆಹಬೂಬ ಮುಫ್ತಿ

Sumana Upadhyaya

ಶ್ರೀನಗರ: ಸಂವಿಧಾನ ವಿಧಿ 370ರೊಳಗೆ ವಿನಾಯ್ತಿ ಹೊಂದಿರುವ ಕಲಂ 35ಎಯನ್ನು ರದ್ದುಪಡಿಸಿದರೆ ಭಾರತದೊಂದಿಗೆ ಕಾಶ್ಮೀರದ ಸಂಬಂಧ ಕೊನೆಯಾಗಲಿದೆ ಎಂದು ಜಮ್ಮು-ಕಾಶ್ಮೀರದ ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಹೇಳಿದ್ದಾರೆ.

ಪಿಡಿಪಿ ಪಕ್ಷ ಈ ಸಂದರ್ಭದಲ್ಲಿ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆ ಚುನಾವಣೆಯಿಂದ ದೂರವುಳಿಯಲು ನಿರ್ಧರಿಸಿದೆ ಎಂದು ಕೂಡ ಅವರು ಹೇಳಿದ್ದಾರೆ.

ಜಮ್ಮು -ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನಕ್ಕೆ ನಾವು ಹಿಂದಿನಿಂದಲೂ ಹೋರಾಟ ನಡೆಸಿಕೊಂಡು ಬಂದಿದ್ದೇವೆ. ವಿಶೇಷ ಸ್ಥಾನಮಾನ ನಮ್ಮ ಜನರ ಬದುಕಿಗೆ ಮತ್ತು ಸಮಾಜಕ್ಕೆ ಅತ್ಯಗತ್ಯ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ಬೇಕಾಗಿದೆ. ಇಂತಹ ವಾತಾವರಣ ಮತ್ತು ಪರಿಸ್ಥಿತಿಯಲ್ಲಿ ಯಾವುದಾದರೂ ವಿಷಯವನ್ನು ಹೇರಲು ಮುಂದಾದರೆ ಸರ್ಕಾರದ ಉದ್ದೇಶ ಅಳಿಸಿಹೋಗುತ್ತದೆ ಮತ್ತು ಅದರ ಮೇಲೆ ನಂಬಿಕೆ ಜನರಿಗೆ ಹೊರಟುಹೋಗುತ್ತದೆ ಎಂದು ಹೇಳಿದರು.

ಜಮ್ಮು-ಕಾಶ್ಮೀರದಲ್ಲಿ ಮುಂದಿನ ಅಕ್ಟೋಬರ್-ನವೆಂಬರ್ ನಲ್ಲಿ ಎಂಟು ಹಂತಗಳಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಘೋಷಿಸಲಾಗಿದೆ. ಕೇಂದ್ರ ಸರ್ಕಾರ ಸಂವಿಧಾನ ವಿಧಿ 35ಎ ಬಗ್ಗೆ ಸ್ಪಷ್ಟ ನಿಲುವು ತಳೆಯುವವರೆಗೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ, ಚುನಾವಣೆ ನಿಷೇಧಿಸುವುದಾಗಿ ನ್ಯಾಷನಲ್ ಕಾನ್ಫರೆನ್ಸ್ ಘೋಷಿಸಿದೆ.

ಭಾರತದೊಂದಿಗೆ ನಮ್ಮ ಸಂಬಂಧ ಸಂವಿಧಾನ ವಿಧಿ 370ರಿಂದಾಗಿ ಉಳಿದುಕೊಂಡಿದೆ. ಒಂದು ವೇಳೆ ಅದನ್ನು ರದ್ದುಗೊಳಿಸಿದರೆ ಭಾರತದೊಂದಿಗಿನ ಸಂಬಂಧ ಕೊನೆಯಾಗುತ್ತದೆ ಎಂದು ಹೇಳಿರುವ ಮೆಹಬೂಬ ಮುಫ್ತಿ ಈ ಸಂಬಂಧ ರಾಜ್ಯಪಾಲರು ಸರ್ಕಾರಕ್ಕೆ ಸ್ಪಷ್ಟ ನಿಲುವು ತಳೆಯುವಂತೆ ಒತ್ತಾಯಿಸಬೇಕು ಎಂದು ಹೇಳಿದ್ದಾರೆ.

SCROLL FOR NEXT