ದೇಶ

ಶತ್ರುಗಳನ್ನು ಹಿಮ್ಮೆಟ್ಟಿಸಲು ವಾಯುಪಡೆ ಸಾಮರ್ಥ್ಯ ಹೆಚ್ಚಿಸಬೇಕು: ವಾಯು ಸೇನಾ ಮುಖ್ಯಸ್ಥ

Srinivasamurthy VN
ನವದೆಹಲಿ: ಬಾಹ್ಯ ಬೆದರಿಕೆ ಮತ್ತು ಶತ್ರು ಪಡೆಯ ಸೇನೆಯನ್ನು ಹಿಮ್ಮೆಟಿಸಲು ವಾಯು ಸೇನೆಯ ಸಾಮರ್ಥ್ಯವನ್ನು ಹೆಚ್ಚಿಸಬೇಕು ಎಂದು ಹೇಳುವ ಮೂಲಕ ಭಾರತೀಯ ವಾಯುಸೇನಾ ಮುಖ್ಯಸ್ಥ ಬಿಎಸ್ ಧನೋವಾ ಅವರು ರಾಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ತಮ್ಮ ಸಹಮತ ವ್ಯಕ್ತಪಡಿಸಿದ್ದಾರೆ.
 ದೆಹಲಿಯಲ್ಲಿ ಆಯೋಜಿಸಲಾಗಿದ್ದ ವಾಯು ಸೇನೆಯ 'ಐಎಎಫ್ ಫೋರ್ಸ್ ಸ್ಟ್ರಕ್ಚರ್ 2035' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಧನೋವಾ ಅವರು, ಪ್ರಸ್ತುತ ಭಾರತ ಎದುರಿಸುತ್ತಿರುವ ಬಾಹ್ಯ ಅತಂಕಗಳಷ್ಟು ವಿಶ್ವದ ಇನ್ನಾವುದೇ ರಾಷ್ಟ್ರವೂ ಎದುರಿಸುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಭಾರತೀಯ ಸೇನೆಯನ್ನು ಪರಿಸ್ಥಿತಿಗೆ ತಕ್ಕಂತೆ ಉನ್ನತೀಕರಿಸಬೇಕಿದೆ. ಪ್ರಸ್ತುತ ಪರಿಸ್ಥಿತಿ ನಾವು ತಿಳಿದಂತೆ ಸಾಮಾನ್ಯವಾಗಿ ಏನೂ ಇಲ್ಲ. ಎದುರಾಳಿಗಳ ಉದ್ದೇಶ ಮತ್ತು ಯೋಜನೆ ರಾತ್ರೋರಾತ್ರಿ ಬದಲಾಗಬಹುದು. ಹೀಗಾಗಿ ಯಾವುದೇ ರೀತಿಯ ಬಾಹ್ಯ ಆತಂಕಗಳಿಗೂ ನಾವು ಸಿದ್ಧರಾಗಿರಬೇಕು.  ಈ ನಿಟ್ಟಿನಲ್ಲಿ ಸೇನೆಯ ಸಾಮರ್ಥ್ಯವನ್ನು ಹೆಚ್ಚಿಸಿ ಬಲಿಷ್ಟಗೊಳಿಸಬೇಕು ಎಂದು ಹೇಳಿದ್ದಾರೆ.
ಏದುರಾಳಿಗಳ ಅಥವಾ ಶತ್ರುಪಡೆಯ ಸೇನೆಗಿಂತಲೂ ಹೆಚ್ಚಿನ ಸಾಮರ್ಥ್ಯವನ್ನು ಅಳವಡಿಸಿಕೊಂಡರೆ ಮಾತ್ರ ಅವುಗಳನ್ನು ಎದುರಿಸಬಹುದು ಎಂದು ಧನೋವಾ ಹೇಳಿದ್ದಾರೆ. ಅಂತೆಯೇ ಚೀನಾ ಮಿಲಿಟರಿ ಆಧುನೀಕರಣವನ್ನು ಉಲ್ಲೇಖಿಸಿ ಮಾತನಾಡಿದ ಅವರು, ಭಾರತದ ನೆರೆಯ ಎದುರಾಳಿ ಚೀನಾ ಎಂದಿಗೂ ತಟಸ್ಥವಾಗಿ ಕುಳಿತಿಲ್ಲ. ತನ್ನ ಸೇನೆಯನ್ನು ನಿರಂತರವಾಗಿ ಆಧುನೀಕರಿಸುತ್ತಿದೆ. ಅದರ ವಾಯು ಸೇನೆಯು ಆಧುನೀಕರಣದತ್ತ ದಾಪುಗಾಲಿರಿಸಿದ್ದು, ಅದಕ್ಕೆ ತಕ್ಕಂತೆ ನಾವು ಕೂಡ ನಮ್ಮ ಭಾರತೀಯ ವಾಯು ಸೇನೆಯನ್ನು ತಾಂತ್ರಿಕವಾಗಿ ಆಧುನೀಕರಿಸಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಾಫೆಲ್ ಜೆಟ್ ಯುದ್ಧ ವಿಮಾನ ಒಪ್ಪಂದ ಮಾಡಿಕೊಂಡಿದ್ದು, ಎಸ್-400 ಕ್ಷಿಪಣಿಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ರಾಫೆಲ್ ಯುದ್ಧ ವಿಮಾನಗಳಿಗಿದೆ ಎಂದು ಧನೋವಾ ಹೇಳಿದ್ದಾರೆ.
ಅಂತೆಯೇ ನಾವು ವಾಯು ಸೇನೆಗೆ 2 ಸ್ಕ್ವಾಡ್ರನ್ (ಒಂದು ಸ್ಕ್ವಾಡ್ರನ್ ನಲ್ಲಿ 12 ರಿಂದ 24 ಯುದ್ಧ ವಿಮಾನಗಳಿರುತ್ತವೆ)ಯುದ್ಧ ವಿಮಾನಗಳ ಅವಶ್ಯಕತೆ ಇದೆ ಎಂದು ಹೇಳಿದ್ದೆವು ಎಂದು ಧನೋವಾ ಹೇಳಿದ್ದಾರೆ.
SCROLL FOR NEXT