ದೇಶ

ಗೋವಾ ಸಿಎಂ ಮನೋಹರ್ ಪರ್ರಿಕರ್ ಅನಾರೋಗ್ಯ; ಬದಲಿ ಸಿಎಂಗೆ ಬಿಜೆಪಿ ಚಿಂತನೆ?

Sumana Upadhyaya

ನವದೆಹಲಿ/ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಅವರ ಆರೋಗ್ಯ ತೀರಾ ಹದಗೆಟ್ಟಿರುವುದರಿಂದ ಬಿಜೆಪಿ ನಾಯಕರು ಆತಂಕಕ್ಕೀಡಾಗಿದ್ದು ಸೋಮವಾರ ಗೋವಾಕ್ಕೆ ಬಿಜೆಪಿಯ ಒಂದು ತಂಡ ತೆರಳಲಿದೆ.

ತಮ್ಮ ಆರೋಗ್ಯ ಹಾಗೂ ಮುಂದಿನ ಕಾರ್ಯನಿರ್ವಹಣೆ ಬಗ್ಗೆ ಮನೋಹರ್ ಪರ್ರಿಕರ್ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
62 ವರ್ಷ ವಯಸ್ಸಿನ ಮನೋಹರ್ ಪರ್ರಿಕರ್ ಕಳೆದ ಹಲವಾರು ತಿಂಗಳಿನಿಂದ ಅನಾರೋಗ್ಯಕ್ಕೀಡಾಗಿದ್ದು ಮುಖ್ಯಮಂತ್ರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಅಮಿತ್ ಶಾ ಅವರಿಗೆ ಹೇಳಿದ್ದಾರೆ ಎನ್ನಲಾಗಿದೆ.

ಕಳೆದ ವಾರ ವೈದ್ಯಕೀಯ ತಪಾಸಣೆ ಮಾಡಿಸಿಕೊಂಡು ಅಮೆರಿಕದಿಂದ ವಾಪಸ್ಸಾಗಿದ್ದ ಮನೋಹರ್ ಪರ್ರಿಕರ್, ಕಳೆದ ಗುರುವಾರ ಮತ್ತೆ ಅನಾರೋಗ್ಯ ಕಾಣಿಸಿಕೊಂಡು ಉತ್ತರ ಗೋವಾ ಜಿಲ್ಲೆಯ ಕಾಂಡೊಲಿಮ್ ನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.

ಅವರ ಆರೋಗ್ಯ ಸ್ಥಿತಿಗತಿಯನ್ನು ವಿಚಾರಿಸಲು ರಾಮ್ ಲಾಲ್ ಮತ್ತು ಬಿ ಎಲ್ ಸಂತೋಷ್ ಅವರನ್ನೊಳಗೊಂಡ ಕೇಂದ್ರ ತಂಡ ಸೋಮವಾರ ಗೋವಾಕ್ಕೆ ತೆರಳಲಿದೆ. ಪರ್ರಿಕರ್ ಅವರ ಆರೋಗ್ಯ ಸ್ಥಿತಿಗತಿ ಬಗ್ಗೆ ಸ್ಪಷ್ಟತೆ ಸಿಗುವವರೆಗೆ ಗೋವಾಕ್ಕೆ ಹಂಗಾಮಿ ಮುಖ್ಯಮಂತ್ರಿಯನ್ನಾಗಿ ಯಾರನ್ನು ನೇಮಕ ಮಾಡಬಹುದು ಎಂಬುದರ ಬಗ್ಗೆ ತಂಡದ ಸದಸ್ಯರು ಚರ್ಚೆ ನಡೆಸಲಿದ್ದಾರೆ. ನಿನ್ನೆ ಗೋವಾ ರಾಜ್ಯದ ಬಿಜೆಪಿ ಘಟಕದ ಸದಸ್ಯರು ಸಭೆ ಸೇರಿ ಚರ್ಚೆ ನಡೆಸಿ ನಂತರ ಪರ್ರಿಕರ್ ಅವರನ್ನು ಭೇಟಿ ಮಾಡಿದ್ದಾರೆ.

ಪರ್ರಿಕರ್ ಅವರ ಬದಲಿಗೆ ಬೇರೊಬ್ಬರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಬಿಜೆಪಿ ಕೂರಿಸುವುದು ಅಷ್ಟು ಸುಲಭವಲ್ಲ. ಕಳೆದ ವರ್ಷ ಗೋವಾ ವಿಧಾನಸಭೆ ಚುನಾವಣೆಯಾದ ನಂತರ ರಕ್ಷಣಾ ಖಾತೆ ಹುದ್ದೆ ತ್ಯಜಿಸಿ ಸಮ್ಮಿಶ್ರ ಸರ್ಕಾರ ರಚಿಸಿ ಮನೋಹರ್ ಪರ್ರಿಕರ್ ಮುಖ್ಯಮಂತ್ರಿಯಾದರು. ಆದರೆ ನಂತರ ಅವರ ಆರೋಗ್ಯ ತೀರಾ ಹದಗೆಡಲು ಆರಂಭಿಸಿತು. ಕೊನೆ ಕ್ಷಣದಲ್ಲಿ ಬಹುಮತ ಸಾಬೀತುಪಡಿಸಲು ಸಾಧ್ಯವಾಗದೆ ಅಧಿಕಾರ ಕಳೆದುಕೊಂಡ ಕಾಂಗ್ರೆಸ್ ನಿಂದ ತೀವ್ರ ಟೀಕೆ, ಆಕ್ರೋಶಕ್ಕೆ ಗುರಿಯಾಗುತ್ತಿದೆ.

SCROLL FOR NEXT