ಸೀಲ್ ಮಾಡಿದ್ದ ಮನೆ ಪ್ರವೇಶ: ದೆಹಲಿ ಬಿಜೆಪಿ ಅಧ್ಯಕ್ಷ ತಿವಾರಿ ವಿರುದ್ಧ ಎಫ್ಐಆರ್
ದೆಹಲಿಯ ಗೋಕಲ್ ಪುರ ಪ್ರದೇಶದಲ್ಲಿ ಸರ್ಕಾರ ವಶಪಡಿಸಿಕೊಂಡಿದ್ದ ಮನೆಯ ಸೀಲ್ ಅನ್ನು ಮುರಿದು,
ದೆಹಲಿ: ದೆಹಲಿಯ ಗೋಕಲ್ ಪುರ ಪ್ರದೇಶದಲ್ಲಿ ಸರ್ಕಾರ ವಶಪಡಿಸಿಕೊಂಡಿದ್ದ ಮನೆಯ ಸೀಲ್ ಅನ್ನು ಮುರಿದು, ಮನೆ ಪ್ರವೇಶಿಸಿದ್ದ ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಅವರ ವಿರುದ್ಧ ಎಫ್ಐಆರ್ ದಾಖಲಿಸಿರುವುದಾಗಿ ಮಂಗಳವಾರ ಪೊಲೀಸರು ತಿಳಿಸಿದ್ದಾರೆ.
ದೆಹಲಿ ಮಾಸ್ಟರ್ ಪ್ಲಾನ್ ಉಲ್ಲಂಘಿಸಿದ್ದಕ್ಕಾಗಿ ಈಶಾನ್ಯ ದೆಹಲಿಯ ಆಸ್ತಿಯನ್ನು ಸೀಲ್ ಮಾಡಲಾಗಿತ್ತು. ಆದರೆ ಆ ಮನೆಯ ಸೀಲ್ ಅನ್ನು ಮುರಿದು ಗೂಂಡಾ ವರ್ತನೆ ತೋರಿದ ಆರೋಪದ ಮೇಲೆ ಮನೋಜ್ ತಿವಾರಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಪೂರ್ವ ದೆಹಲಿ ಮಹಾನಗರ ಪಾಲಿಕೆ ಅಧಿಕಾರಿಗಳು ನೀಡಿದ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 188 ರಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿರುವ ಮನೋಜ್ ತಿವಾರಿ, 1,000 ಮನೆಗಳು ಅಕ್ರಮವಾಗಿ ನಿರ್ಮಾಣವಾಗಿದ್ದರೆ, ಕೇವಲ ಒಂದೇ ಒಂದು ಮನೆಗೆ ಬೀಗ ಹಾಕಿರುವುದು ಏಕೆ? ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ, ಈ ಆಯ್ಕೆ ಪದ್ಧತಿಯನ್ನು ನಾನು ವಿರೋಧಿಸಿಸುತ್ತೇನೆ. ಆದ್ದರಿಂದ ಸೀಲ್ ಅನ್ನು ಮುರಿದಿದ್ದೇನೆ ಎಂದಿದ್ದಾರೆ.