ಕೇಂದ್ರ ಸಚಿವ ಬಬುಲ್ ಸುಪ್ರಿಯೋ
ಕೋಲ್ಕತಾ: ತಮ್ಮ ಭಾಷಣಕ್ಕೆ ಅಡ್ಡಿ ಮಾಡುತ್ತಿದ್ದಾನೆ ಎಂದು ಆಕ್ರೋಶಗೊಂಡ ಕೇಂದ್ರ ಸಚಿವ ಬಬುಲ್ ಸುಪ್ರಿಯೋ ಅವರು, ನಿನ್ನ ಕಾಲು ಮುರಿದು ವೀಲ್ ಚೇರ್ ನೀಡುತ್ತೇನೆ ಎಂದು ಧಮ್ಕಿ ಹಾಕುವ ಮೂಲಕ ದರ್ಪ ತೋರಿದ್ದಾರೆ.
ಪಶ್ಚಿಮ ಬಂಗಾಳದ ಅಸನ್ಸೋಲ್ ನಲ್ಲಿ ಮಂಗಳವಾರ ನಡೆದ ಅಂಗವಿಕಲರ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವ ಬಬುಲ್ ಸುಪ್ರಿಯೊ ಒಂದು ಕ್ಷಣದಲ್ಲಿ ಅಕ್ಷರಶಃ ತಾಳ್ನೆ ಕಳೆದುಕೊಂಡಿದ್ದರು. ಅಂಗವಿಕಲರಿಗೆ ಗಾಲಿಕುರ್ಚಿ ಮತ್ತು ಇತರ ಪರಿಕರ ವಿತರಿಸುವ "ಸಾಮಾಜಿಕ ಅಧಿಕಾರಿತಾ ಶಿವಾರ್" ಸಮಾರಂಭಕ್ಕೆ ಸುಪ್ರಿಯೊ ಅವರನ್ನು ಆಹ್ವಾನಿಸಲಾಗಿತ್ತು. ಸಾರ್ವಜನಿಕರ ಪೈಕಿ ಓರ್ವ ಸಭೆಯಲ್ಲಿ ಓಡಾಡುತ್ತಿದ್ದುದನ್ನು ಕಂಡ ಸಚಿವರು, ಸಿಡಿಮಿಡಿಗೊಂಡು 'ಏಕೆ ಓಡಾಡುತ್ತಿದ್ದಿ ? ಒಂದು ಕಡೆ ಕುಳಿತು ಕೊ" ಎಂದು ಹೇಳಿದರು. ಆದರೂ ಆತ ಅತ್ತಿಂದಿತ್ತ ಓಡುತ್ತಿದ್ದುದು ಸಚಿವರ ತಾಳ್ಮೆಗೆಡಿಸಿತು. ಸಚಿವರು ಸಿಟ್ಟಿನಿಂದ, "ನಿನಗೇನಾಗಿದೆ ? ಏನಾದರೂ ಸಮಸ್ಯೆ ಇದೆಯೇ ?
ನಾನು ನಿನ್ನ ಕಾಲು ಮುರಿದು, ನಿನಗೂ ಊರುಗೋಲು ಕೊಡಬಲ್ಲೆ" ಎಂದು ಅಬ್ಬರಿಸಿದರು. ಬಳಿಕ ಭದ್ರತಾ ಸಿಬ್ಬಂದಿಯನ್ನು ಕುರಿತು, "ಇನ್ನು ಆತ ತನ್ನ ಜಾಗದಿಂದ ಎದ್ದು ಓಡಾಡಿದರೆ ಆತನ ಕಾಲು ಮುರಿದು ಊರುಗೋಲು ಕೊಡಿ" ಎಂದು ಆದೇಶಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೆಲವರು ಇದನ್ನು ವಿಡಿಯೋ ಮಾಡಿಕೊಂಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇನ್ನು ಕೇಂದ್ರ ಸಚಿವ ಸುಪ್ರಿಯೋ ಅವರ ವಿವಾದಾತ್ಮಕ ಹೇಳಿಕೆಗಳ ಸರಣಿ ಇದೇ ಮೊದಲೇನಲ್ಲ, ಕಳೆದ ಮಾರ್ಚ್‌ನಲ್ಲಿ ರಾಮನವಮಿ ಸಂದರ್ಭದಲ್ಲಿ ನಡೆದ ಕೋಮುಗಲಭೆ ವೇಳೆ ಇದೇ ಅಸನ್ಸೋಲ್ ಗೆ ಭೇಟಿ ನೀಡಿದ್ದ ಸುಪ್ರಿಯೊ, ಪ್ರತಿಭಟನಕಾರರನ್ನು ಕುರಿತು, ನಿಮ್ಮ ಚರ್ಮ ಸುಲಿಯುತ್ತೇನೆ ಎಂದು ಅಬ್ಬರಿಸಿದ್ದರು. ಈ ವಿಚಾರ ಕೂಡ ಭಾರಿ ಸುದ್ದಿಗೆ ಗ್ರಾಸವಾಗಿತ್ತು.