ಜೈಪುರ: ಭಾರತದಲ್ಲಿರುವ ಬಾಂಗ್ಲಾದೇಶದ ವಲಸಿಗರು ಕ್ರಿಮಿಗಳಾಗಿದ್ದು ಪ್ರತಿಯೊಬ್ಬರನ್ನೂ ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುವುದು ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಶನಿವಾರ ಹೇಳಿದ್ದಾರೆ.
ಇಂದು ರಾಜಸ್ಥಾನದ ಮಧೋಪುರ್ ಜಿಲ್ಲೆಯ ಸವೈಯಲ್ಲಿ ಬಿಜೆಪಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಅಸ್ಸಾಂನಲ್ಲಿ ಎನ್‌ಆರ್‌ಸಿ ಕರಡನ್ನು ತರುವ ಮೂಲಕ ಬಿಜೆಪಿ ಸರ್ಕಾರ ಮೇಲುನೋಟಕ್ಕೇ ನಾಲ್ಕು ಲಕ್ಷ ಅಕ್ರಮ ವಲಸಿಗರನ್ನು ಪತ್ತೆ ಮಾಡಿದೆ ಎಂದರು.
ಪ್ರತಿಯೊಬ್ಬ ನುಸುಳುಕೋರನನ್ನೂ ಪತ್ತೆ ಮಾಡಿ ಅವರನ್ನು ಮತದಾರರ ಪಟ್ಟಿಯಿಂದ ಕೊತ್ತೊಗೆಯಲಾಗುವುದು ಎಂದು ಶಾ ತಿಳಿಸಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅಮಿತ್ ಶಾ, ನಾಯಕನಿಲ್ಲದ, ನೀತಿ ಇಲ್ಲದ ಕಾಂಗ್ರೆಸ್ ಪಕ್ಷದಿಂದ ದೇಶಕ್ಕೆ ಯಾವುದೇ ಒಳಿತಾಗುವ ಸಾಧ್ಯತೆ ಇಲ್ಲ. ಬಿಜೆಪಿ ಸರ್ಕಾರದಿಂದ ದೇಶಕ್ಕೆ ಏನೇನೆಲ್ಲಾ ಆಗಿದೆ ಎಂದು ಕೇಳುತ್ತಿರುವ ರಾಹುಲ್ ಬಾಬಾ, ತಮ್ಮ ಕುಟುಂಬದ ನಾಲ್ಕು ತಲೆಮಾರುಗಳು ದೇಶಕ್ಕೆ ಏನೆಲ್ಲಾ ಮಾಡಿದೆ ಎಂದು ತಿಳಿಯಲು ಜನತೆ ಇಚ್ಛಿಸುತ್ತಾರೆ ಎಂದು ತಿರುಗೇಟು ನೀಡಿದರು.