ಶಿಮ್ಲಾ: ಹಿಮದ ನಾಡು ಹಿಮಾಚಲ ಪ್ರದೇಶದಲ್ಲಿ ಭಾರಿ ಹಿಮಪಾತ ನಡುವೆ ನಾಪತ್ತೆಯಾಗಿದ್ದ ಎಲ್ಲ 45 ಮಂದಿ ಪ್ರವಾಸಿಗರು ಸುರಕ್ಷಿತವಾಗಿದ್ದಾರೆ ಎಂದು ಸಿಎಂ ಜೈ ರಾಮ್ ಠಾಕೂರ್ ಹೇಳಿದ್ದಾರೆ.
ಬೆಳಗ್ಗೆ ಹಿಮಾಚಲ ಪ್ರದೇಶದ ಲಹೌಲ್ ಮತ್ತು ಸ್ಪಿಟಿ ಪ್ರದೇಶದಲ್ಲಿ ನಾಪತ್ತೆಯಾಗಿದ್ದ ಸುಮಾರು 45 ಮಂದಿ ಪ್ರವಾಸಿಗರು ಸುರಕ್ಷಿತವಾಗಿದ್ದಾರೆ ಎಂದು ಹಿಮಾಚಲ ಪ್ರದೇಶ ಸಿಎಂ ಜೈರಾಮ್ ಠಾಕೂರ್ ಹೇಳಿದ್ದಾರೆ. ಪ್ರವಾಸಿಗರ ತಂಡದಲ್ಲಿ ರೂರ್ಕಿ ಐಐಟಿಯ 35 ವಿದ್ಯಾರ್ಥಿಗಳೂ ಸೇರಿದಂತೆ ಒಟ್ಟು 45ಮಂದಿ ಪ್ರವಾಸಿಗರು ಹಮ್ಜ್ಟಾ ಪಾಸ್ ಗೆ ಟ್ರೆಕಿಂಗ್ ಗೆ ತೆರಳಿದ್ದರು. ಈ ವೇಳೆ ಸಂಭವಿಸಿದ್ದ ಹಿಮಪಾತದಿಂದಾಗಿ ಪ್ರವಾಸಿಗರು ನಾಪತ್ತೆಯಾಗಿದ್ದರು. ಬಳಿಕ ಪ್ರವಾಸಿಗರ ಸಂಪರ್ಕ ಸಾಧ್ಯವಾಗಿರಲ್ಲಿಲ್ಲ. ಇದೀಗ ಪ್ರವಾಸಿಗರ ಇರುವಿಕೆಯ ಸಂಪರ್ಕ ಸಾಧ್ಯವಾಗಿದ್ದು, ಪ್ರವಾಸಿಗರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಜೈರಾಮ್ ಠಾಕೂರ್ ಹೇಳಿದ್ದಾರೆ.
ಪ್ರವಾಸಿಗರು ಲಹೌತ್ ಮತ್ತು ಸ್ಪಿಟಿ ಪ್ರದೇಶದ ಸಿಸ್ಸು ಶಿಬಿರದಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಜೈರಾಮ್ ಠಾಕೂರ್ ಹೇಳಿದ್ದಾರೆ.
ಕಳೆದ 2 ವಾರಗಳಿಂದ ಹಿಮಾಚಲ ಪ್ರದೇಶದಲ್ಲಿ ಭಾರಿ ಹಿಮಪಾತ ಮತ್ತು ಸತತ ಮಳೆ ಸಂಭವಿಸುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಈಗಾಗಲೇ ಹಿಮಾಚಲ ಪ್ರದೇಶದಲ್ಲಿ ಮಳೆಗೆ 5 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.