ದೇಶ

ಸಿಜೆಐ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ವಿಚಾರಣಾ ಸಮಿತಿಯಿಂದ ಹೊರಬಂದ ನ್ಯಾಯಮೂರ್ತಿ ಎನ್.ವಿ.ರಮಣ

Nagaraja AB

ನವದೆಹಲಿ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ  ರಂಜನ್ ಗೊಗೋಯ್ ವಿರುದ್ಧ ಕೇಳಿಬಂದಿರುವ ಲೈಂಗಿಕ ಕಿರುಕುಳ ಆರೋಪ ಪರಿಶೀಲನೆಗಾಗಿ  ರಚಿಸಲಾಗಿರುವ  ಮೂವರು ಸದಸ್ಯರನ್ನೊಳಗೊಂಡ ವಿಚಾರಣಾ ಸಮಿತಿಯಿಂದ ನ್ಯಾಯಮೂರ್ತಿ ಎನ್. ವಿ. ರಮಣ  ಹೊರಬಂದಿದ್ದಾರೆ.

ನ್ಯಾಯಮೂರ್ತಿ ಎನ್. ವಿ. ರಮಣ ಸಿಜೆಐ ನ ಆಪ್ತ ಮಿತ್ರ, ಅಷ್ಟೇ ಅಲ್ಲದೇ ಕುಟುಂಬ ಸದಸ್ಯರಿದ್ದಂತೆ. ಸಿಜೆಐ ನಿವಾಸಕ್ಕೆ ಅವರು ಆಗಾಗ್ಗೆ ಹೋಗುತ್ತಿರುತ್ತಾರೆ. ಆದ್ದರಿಂದ  ನ್ಯಾಯಸಮ್ಮತವಾದ ವಿಚಾರಣೆ ನಡೆಯಬೇಕಾದರೆ ನ್ಯಾ. ಎನ್ ವಿ ರಮಣ ಅವರನ್ನು ಸಮಿತಿಯಿಂದ ಕೈಬಿಡಬೇಕು ಎಂದು ಸಮಿತಿ ಸದಸ್ಯರಿಗೆ ಆ ಮಹಿಳೆ ಪತ್ರ ಬರೆದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಸಿಜೆಐ ವಿರುದ್ಧ ಕೇಳಿಬಂದಿರುವ ಲೈಂಗಿಕ ಕಿರುಕುಳ ಪ್ರಕರಣದ ವಿಚಾರಣೆ ನಡೆಸಲು ನ್ಯಾಯಮೂರ್ತಿ  ಎಸ್ಎ ಬಾಬ್ಡೆ ನೇತೃತ್ವದಲ್ಲಿನ ವಿಚಾರಣಾ ಸಮಿತಿಯನ್ನು ರಚಿಸಲಾಗಿದೆ.

ಸುಪ್ರೀಂ ಕೋರ್ಟ್ ವಿಧಿಸಿರುವ ವಿಶಾಖಾ ಮಾರ್ಗಸೂಚಿಗಳ ಪ್ರಕಾರ ಇಂತಹ ಪ್ರಕರಣಗಳ ವಿಚಾರಣೆ ನಡೆಸುವಾಗ ಮಹಿಳಾ ನ್ಯಾಯಮೂರ್ತಿಗಳು ಹೆಚ್ಚಿನ ಸಂಖ್ಯೆಯಲ್ಲಿರಬೇಕು, ಆದರೆ ಈ ಪ್ರಕರಣದಲ್ಲಿ ಇಂದ್ರಾ ಬ್ಯಾನರ್ಜಿ  ಒಬ್ಬರೇ ಮಹಿಳಾ ನ್ಯಾಯಮೂರ್ತಿ ಇದ್ದಾರೆ ಎಂದು  ನ್ಯಾಯಮೂರ್ತಿ ಎಸ್ ಎ ಬಾಬ್ಡೆ ಅವರಿಗೆ ಬರೆದಿರುವ ಪತ್ರದಲ್ಲಿ  ಮಹಿಳೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಿಜೆಐ ನಿವಾಸದಲ್ಲಿ ಕೆಲಸ ಮಾಡುವಾಗ ನ್ಯಾಯಮೂರ್ತಿ ರಮಣ ರಂಜನ್ ಗೊಗೋಯ್ ಅವರ ಕುಟುಂಬ ಸದಸ್ಯರಂತೆ ಇರುವುದನ್ನು ನಾನು ನೋಡಿದ್ದೇನೆ. ಆಗಾಗ್ಗೆ ಅವರು ಭೇಟಿ ನೀಡುತ್ತಿದ್ದರು. ಆದ್ದರಿಂದ ನನ್ನ  ಅಪಿಢವಿಟ್ ಹಾಗೂ ಸಾಕ್ಷ್ಯಧಾರಗಳು ಉದ್ದೇಶಪೂರ್ವಕವಾಗಿ ಸ್ವೀಕರಿಸದೆ ಮುಕ್ತ ವಿಚಾರಣೆ ನಡೆಯಲು ಸಾಧ್ಯವಿಲ್ಲ ಎಂಬ ಆತಂಕ ಕಾಡುತ್ತಿದೆ ಎಂದು ಮಹಿಳೆ ಪತ್ರದಲ್ಲಿ ಬರೆದಿದ್ದರು ಎಂಬುದು ಮೂಲಗಳಿಂದ ತಿಳಿದುಬಂದಿದೆ.

ವಕೀಲರ ಜೊತೆಗೆ ವಿಚಾರಣೆ ಸಮಿತಿ ಮುಂದೆ ಹಾಜರಾಗಲು ತಮ್ಮಗೂ ಅವಕಾಶ ನೀಡಬೇಕು, ಸಮಿತಿಯ ನ್ಯಾಯಿಕ ಪ್ರಕ್ರಿಯೆಗಳನ್ನು ವಿಡಿಯೋ ಚಿತ್ರೀಕರಣ ಮಾಡುವುದರಿಂದ  ವಿವಾದಕ್ಕೆ ಆಸ್ಪದ ವಿಲ್ಲದೆ ಪ್ರಾಮಾಣಿಕ ರೀತಿಯಲ್ಲಿ ವಿಚಾರಣೆ ನಡೆಯಲು ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಮಹಿಳೆ ಸಮಿತಿ ಮುಂದೆ ಕೇಳಿಕೊಂಡಿದ್ದಾರೆ.

ಈ ಮಧ್ಯೆ  ಗೊಗೋಯ್ ಅವರ ಹೆಸರಿಗೆ ಧಕ್ಕೆ ತರುವ ನಿಟ್ಟಿನಲ್ಲಿ ಪಿತ್ತೂರಿ ನಡೆಸಲಾಗಿದೆ ಎಂದು ದೆಹಲಿ ಮೂಲದ ವಕೀಲರೊಬ್ಬರು ಮಾಡಿರುವ ಆರೋಪದ ಬಗ್ಗೆ ತನಿಖೆ ನಡೆಸುವಂತೆ ನಿವೃತ್ತ ನ್ಯಾಯಾಧೀಶ ಎ. ಕೆ. ಪಾಟ್ನಾಯಕ್ ಅವರಿಗೆ ಸುಪ್ರೀಂಕೋರ್ಟ್ ಸೂಚಿಸಿದೆ.
ಅಗತ್ಯಬಿದ್ದರೆ ಸಿಬಿಐ ನಿರ್ದೇಶಕರು, ಐಬಿ ನಿರ್ದೇಶಕರು ಮತ್ತು ದೆಹಲಿ ಪೊಲೀಸ್ ಆಯುಕ್ತರು  ಪಾಟ್ನಾಯಕ್ ಅವರಿಗೆ ಸಹಕಾರ ನೀಡುವಂತೆ ಅರುಣ್ ಮಿಶ್ರಾ, ಆರ್ .ಎಫ್. ನಾರಿಮನ್ ಮತ್ತು ದೀಪಕ್ ಗುಪ್ತಾ ಅವರನ್ನೊಳಗೊಂಡ ವಿಶೇಷ ಪೀಠ ಸೂಚಿಸಿದೆ.
SCROLL FOR NEXT