ದೇಶ

ಅಮರನಾಥ ಯಾತ್ರೆ ಮುಂದುವರಿಕೆ- ಜಮ್ಮು ಕಾಶ್ಮೀರ ಬಿಜೆಪಿ ಅಧ್ಯಕ್ಷ

Nagaraja AB
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ ನಡೆಯುವ ಸಾಧ್ಯತೆ ಇದ್ದು, ಕೂಡಲೇ ಅಮರನಾಥ ಯಾತ್ರಿಗಳು ತಮ್ಮ ಯಾತ್ರೆಯನ್ನು ಮೊಟಕುಗೊಳಿಸಿ, ಕಣಿವೆ ರಾಜ್ಯವನ್ನು ತೊರೆಯುವಂತೆ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಆದೇಶಿಸಿರುವ ಬೆನ್ನಲ್ಲೇ, ನಿಗದಿಯಂತೆ ಆಗಸ್ಟ್ 15ರವರೆಗೂ ಯಾತ್ರೆಯನ್ನು ಮುಂದುವರೆಸಲಾಗುವುದು ಎಂದು ಜಮ್ಮು-ಕಾಶ್ಮೀರದ ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ ಹೇಳಿದ್ದಾರೆ.
ಈಗಾಗಲೇ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿದೆ. ಯಾವುದೇ ರೀತಿಯ ಭಯದ ವಾತಾವರಣವಿಲ್ಲ, ನಿಗದಿಯಂತೆ ಆಗಸ್ಟ್ 15 ರವರೆಗೂ ಅಮರನಾಥ ಯಾತ್ರೆಯನ್ನು ಮುಂದುವರೆಸಲಾಗುವುದು ಎಂದು ಅವರು ಸುದ್ದಿಸಂಸ್ಥೆಯೊಂದಕ್ಕೆ  ತಿಳಿಸಿದ್ದಾರೆ.
ಕಾಶ್ಮೀರ ಕಣಿವೆಯಲ್ಲಿ ಅಮರನಾಥ ಯಾತ್ರೆಯ ಭಕ್ತಾಧಿಗಳು, ಪ್ರವಾಸಿಗರು, ನಾಗರಿಕರ ಬಗ್ಗೆ ಗುರಿಹಿಡಿಯುವ ಪಾಕಿಸ್ತಾನದ ಉಗ್ರಗಾಮಿಗಳ ಪ್ರಯತ್ನವನ್ನು ನಮ್ಮ ವೀರ ಯೋಧರು, ಜಮ್ಮು- ಕಾಶ್ಮೀರ ಪೊಲೀಸ್ ಪಡೆ ಹಾಗೂ ಅರಸೇನಾ ಪಡೆ ವಿಫಲಗೊಳಿಸಲಿವೆ ಎಂಬ ಅಚಲ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. 
ಪಾಕಿಸ್ತಾನ ನಿರ್ಮಿತ ಸ್ನಿಪರ್ ರೈಪಲ್, ಶಸ್ತ್ರಾಸ್ತ್ರ ಮತ್ತು ಯುದ್ಧಸಾಮಗ್ರಿಗಳನ್ನು ನಮ್ಮ ಸೈನಿಕರು ವಶಪಡಿಸಿಕೊಂಡಿದ್ದಾರೆ. ಒಂದು ವೇಳೆ ಪಾಕಿಸ್ತಾನದ ಉಗ್ರರು ಭಕ್ತಾಧಿಗಳ ಮೇಲೆ ದಾಳಿ ಮಾಡಲು ಮುಂದಾದರೆ ಪಾಕಿಸ್ತಾನದ ವಿರುದ್ಧ ನಾವೆಲ್ಲಾ ಹೋರಾಟ ನಡೆಸಬೇಕಾಗಿದೆ ಎಂದು ಅವರು ಹೇಳಿದರು.
SCROLL FOR NEXT