ದೇಶ

ರಾಜ್ಯಸಭೆಯಲ್ಲಿ ಕೋಲಾಹಲ: ಸಂವಿಧಾನ ಹರಿದು ಹಾಕಿದ ಪಿಡಿಪಿ ಸದಸ್ಯರು!

Srinivasamurthy VN
ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಅಧಿಕಾರ ನೀಡುವ ಸಂವಿಧಾನದ ಕಲಂ 370, 35ಎ ರದ್ದು ಘೋಷಣೆಯಾಗುತ್ತಿದ್ದಂತೆಯೇ ಗದ್ದಲವೆಬ್ಬಿಸಿ ಸಂವಿಧಾನವನ್ನು ಹರಿದುಹಾಕಿದ ಪಿಡಿಪಿ ಪಕ್ಷದ ಸದಸ್ಯರನ್ನು ಮಾರ್ಷಲ್ ಗಳು ಹೊರ ಹಾಕಿದ ಘಟನೆ ರಾಜ್ಯಸಭೆಯಲ್ಲಿ ನಡೆಯಿತು.
ರಾಜ್ಯಸಭೆ ಕಲಾಪ ಆರಂಭವಾಗುತ್ತಿದ್ದಂತೆಯೇ ವಿಪಕ್ಷಗಳ ತೀವ್ರ ಗದ್ದಲದ ನಡುವೆಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಜಮ್ಮು ಮತ್ತು ಕಾಶ್ಮೀರ ವಿಶೇಷಾಧಿಕಾರ ನೀಡುವ ಸಂವಿಧಾನದ ಕಲಂ 370, 35ಎ ಅನ್ನು ರದ್ದು ಗೊಳಿಸುವ ತಿದ್ದುಪಡಿ ವಿಧೇಯಕವನ್ನು ಮಂಡಿಸಿದ್ದಾರೆ. 
ಅತ್ತ ಅಮಿತ್ ಶಾ ತಿದ್ದುಪಡಿ ಮಸೂದೆ ಮಂಡಿಸುತ್ತಿದ್ದಂತೆಯೇ ಇತ್ತ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಸೇರಿದಂತೆ ಹಲವು ಪ್ರತಿಪಕ್ಷ ನಾಯಕರು ತಿದ್ದುಪಡಿ ವಿಧೇಯಕಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಅಂತಿಮವಾಗಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಎಷ್ಟೇ ಸಮಾಧಾನಿಸುವ ಪ್ರಯತ್ನ ಮಾಡಿದರೂ ಸದಸ್ಯರು ಸುಮ್ಮನಾಗಲಿಲ್ಲ. ಈ ವೇಳೆ ಪಿಡಿಪಿಯ ಮೀರ್ ಫಯಾಜ್ ಮತ್ತು ನಾಜಿ ಅಹ್ಮದ್ ಲಾವೇ ಅವರು ತಮ್ಮ ಬಳಿ ಇದ್ದ ಭಾರತೀಯ ಸಂವಿಧಾನದ ಪುಸ್ತಿಕೆಯನ್ನು ಹರಿದು ಹಾಕಿದರು.
ಇದನ್ನು ಗಮನಿಸಿದ ಸಭಾಪತಿ ವೆಂಕಯ್ಯ ನಾಯ್ಡು ಅವರು ಅವರನ್ನು ಸಮಾಧಾನಿಸುವ ಕೆಲಸ ಮಾಡಿದರಾದರೂ, ಅವರು ಕೋಲಾಹಲ ವೆಬ್ಬಿಸಿದ್ದರಿಂದ ಮಾರ್ಷಲ್ ಗಳನ್ನು ಕೂಗಿದ ವೆಂಕಯ್ಯ ನಾಯ್ಜು ಸದಸ್ಯರನ್ನು ಹೊರಗೆ ಕಳುಹಿಸಿ ಎಂದರು. ಒಂದು ವೇಳೆ ಪ್ರತಿಭಟನೆ ತೋರಿದರೆ, ಎತ್ತಿಕೊಂಡು ಹೋಗಿ ಹೊರಗೆ ಹಾಕಿ ಎಂದು ಹೇಳಿದರು.
ಇನ್ನು ಇಂದು ರಾಜ್ಯಸಭೆಯಲ್ಲಿ ವಿಶೇಷ ಮೀಸಲಾತಿ ತಿದ್ದುಪಡಿ ಮಂಡಿಸಿದ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು, ಜಮ್ಮು ಮತ್ತು ಕಾಶ್ಮೀರದ ವಿಶೇಷಾಧಿಕಾರದ ಕಲಂ 370, 35ಎ ರದ್ದು ಮಾಡಲಾಗಿದೆ. ಅಂತೆಯೇ ಜಮ್ಮು ಮತ್ತು ಕಾಶ್ಮೀರ ಇನ್ನು ಮುಂದೆ ಕೇಂದ್ರಾಡಳಿತ ಪ್ರದೇಶವಾಗಿರಲಿದ್ದು, ಅಲ್ಲಿ ವಿಧಾನಸಭೆ ಇರುತ್ತದೆ. ಅಂತೆಯೇ ಲಡಾಖ್ ಕೂಡ ಕೇಂದ್ರಾಡಳಿತ ಪ್ರದೇಶವಾಗಿರಲಿದ್ದು, ಆದರೆ ಅಲ್ಲಿ ವಿಧಾನಸಭೆ ಇರುವುದಿಲ್ಲ ಎಂದು ಘೋಷಣೆ ಮಾಡಿದರು. 
SCROLL FOR NEXT