ಶಾಲಾ ವ್ಯಾನ್ ಮಗುಚಿ ಬಿದ್ದ ದೃಶ್ಯ ಮತ್ತು ಮಕ್ಕಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿರುವುದು
ಡೆಹ್ರಾಡೂನ್: ಶಾಲಾ ಬಸ್ಸೊಂದು ಕಂದಕಕ್ಕೆ ಉರುಳಿದ ಪರಿಣಾಮ ಕನಿಷ್ಠ 9 ಮಕ್ಕಳು ಮೃತಪಟ್ಟಿದ್ದು ಇತರ 14 ಮಂದಿ ಗಾಯಗೊಂಡಿರುವ ಘಟನೆ ಉತ್ತರಾಖಂಡದ ತೆಹ್ರಿ ಪ್ರಾಂತ್ಯದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.
ಶಾಲಾ ವಾಹನ ಮದನ್ನೆಗಿ ಕಡೆಗೆ ಹೋಗುತ್ತಿದ್ದಾಗ ಪ್ರತಾಪ್ ನಗರ್ - ಕಂಗ್ಸಾಲಿ-ಮದನ್ ನೇಗಿ ರಸ್ತೆಯಲ್ಲಿ ಈ ಅವಘಡ ಸಂಭವಿಸಿದೆ ಎಂದು ತೆಹ್ರಿ ಜಿಲ್ಲಾಧಿಕಾರಿ ವಿ.ಷಣ್ಮುಗಮ್ ಮಾಹಿತಿ ನೀಡಿದ್ದಾರೆ.
ರಾಜ್ಯ ವಿಪತ್ತು ನಿರ್ವಹಣಾ ಪಡೆ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.
ಘಟನೆಗೆ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ರಕ್ಷಣಾ ಮತ್ತು ಪರಿಹಾರ ಕಾರ್ಯ ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಘಟನೆಯ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದೆ. ಗಾಯಾಳುಗಳನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ. ಗಂಭೀರ ಗಾಯಗೊಂಡ ನಾಲ್ವರನ್ನು ವಿಮಾನದ ಮೂಲಕ ರಿಷಿಕೇಷದಲ್ಲಿರುವ ಏಮ್ಸ್ ಗೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.