ದೇಶ

ಮಧ್ಯಪ್ರದೇಶ: ನೀರು ಕೇಳಿದ ಬುಡಕಟ್ಟು ಜನರಿಗೆ ಮೂತ್ರ ಕುಡಿಸಿದ ಪೊಲೀಸರು; ಅಧಿಕಾರಿಗಳ ಅಮಾನತು! 

Srinivas Rao BV

ಭೋಪಾಲ್: ವಶಕ್ಕೆ ಪಡೆದಿದ್ದ ಬುಡಕಟ್ಟು ಜನರ ಮೇಲೆ ಹಲ್ಲೆ ನಡೆಸಿ, ನೀರು ಕೇಳಿದರೆ ಮೂತ್ರ ಕುಡಿಸಿದ ಮಧ್ಯಪ್ರದೇಶದ ಪೊಲೀಸರನ್ನು ಅಮಾನತು ಮಾಡಲಾಗಿದೆ. 

ಅಲಿರಾಜ್ ಪುರದ ನಾನ್ ಪುರ ಪೊಲೀಸ್ ಠಾಣೆಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಬುಡಕಟ್ಟು ಜನಾಂಗದ ಯುವಕರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಈ ರೀತಿ ವಶಕ್ಕೆ ಪಡೆಯಲಾಗಿದ್ದ ಬುಡಕಟ್ಟು ಜನಾಂಗಕ್ಕೆ ಸೇರಿದ 5 ರನ್ನು ಪೊಲೀಸರು ಮನಸೋ ಇಚ್ಛೆ ಥಳಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಪೊಲೀಸ್ ಕಸ್ಟಡಿಯಲ್ಲಿದ್ದ ಬುಡಕಟ್ಟು ಜನರು ಕುಡಿಯುವುದಕ್ಕೆ ನೀರು ಕೇಳಿದರೆ ಪೊಲೀಸ್ ಅಧಿಕಾರಿಗಳು ಮೂತ್ರ ಕುಡಿಸಿ ವಿಕೃತಿ ಮೆರೆದಿದ್ದಾರೆ. 

ಅಮಾನವೀಯ ನಡತೆ ತೋರಿರುವ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದ್ದು, ಅವರ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಲಾಗಿದೆ. 

ಘಟನೆಯ ಹಿನ್ನೆಲೆ: 5 ಯುವಕರ ಪೈಕಿ ಓರ್ವನ ಸಹೋದರಿಗೆ ಮತ್ತೋರ್ವ ಯುವಕ ಕಿರುಕುಳ ನೀಡುತ್ತಿದ್ದ. ಈ ಹಿನ್ನೆಲೆಯಲ್ಲಿ  5 ಯುವಕರು ಕಿರುಕುಳ ನೀಡುತ್ತಿದ್ದ ಯುವಕನ ಬೆನ್ನಟ್ಟಿದ್ದರು. ಭಯಗೊಂಡಿದ್ದ ಆತ ಪೊಲೀಸರ ಮೊರೆ ಹೋಗಿದ್ದ. ಐವರನ್ನು ಕರೆಸಿದ ಪೊಲೀಸರು ವಿಚಾರಣೆ ಪ್ರಾರಂಭಿಸಿದಾಗ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾರೆ. 5 ಜನರ ಮೇಲೆ ಬೇರೆ ಯಾರೂ ಪ್ರಕರಣ ದಾಖಲಿಸಿಲ್ಲವಾದರೂ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಹಿನ್ನೆಲೆಯಲ್ಲಿ ಬಂಧಿಸಲಾಗಿತ್ತು.

SCROLL FOR NEXT