ದೇಶ

'ಸದ್ಯ ಬಂಧನವಾಗಿದೆ, ಒಳ್ಳೆಯ ಸುದ್ದಿ': ಚಿದಂಬರಂ ಬಂಧನದ ಬಳಿಕ ಇಂದ್ರಾಣಿ ಮುಖರ್ಜಿ ಹೇಳಿದ್ದೇನು?

Srinivasamurthy VN

ಮಾಜಿ ಕೇಂದ್ರ ಸಚಿವ ಚಿದಂಬರಂ ಬಂಧನದ ಬಳಿಕ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ಇಂದ್ರಾಣಿ ಮುಖರ್ಜಿ

ನವದೆಹಲಿ: ಐಎನ್ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಚಿದಂಬರಂ ಬಂಧನದಲ್ಲಿ ಪ್ರಮುಖ ಕಾರಣರು ಎಂದು ಹೇಳಲಾಗುತ್ತಿರುವ ಉದ್ಯಮಿ ಇಂದ್ರಾಣಿ ಮುಖರ್ಜಿ ಇದೇ ಮೊದಲ ಬಾರಿಗೆ ಚಿದು ಬಂಧನ ಸಂಬಂಧ ಪ್ರತಿಕ್ರಿಯೆ ನೀಡಿದ್ದಾರೆ.

ಹೌದು.. ಐಎನ್​ಎಕ್ಸ್​ ಮೀಡಿಯಾ ಪ್ರಕರಣದಲ್ಲಿ ಆರೋಪ ಹೊತ್ತು ಸಿಬಿಐ ವಶದಲ್ಲಿರುವ ಕೇಂದ್ರದ ಮಾಜಿ ವಿತ್ತ ಸಚಿವ ಪಿ ಚಿದಂಬರಂ ಅವರ ಬಂಧನದ ಬಗ್ಗೆ ಇದೇ ಮೊದಲ ಬಾರಿಗೆ ಇಂದ್ರಾಣಿ ಮುಖರ್ಜಿ ಪ್ರತಿಕ್ರಿಯಿಸಿದ್ದು, "ಪಿ ಚಿದಂಬರಂ ಅವರನ್ನು ಬಂಧಿಸಿರುವುದು ಒಳ್ಳೆಯ ವಿಚಾರ. ಒಳ್ಳೆಯ ಸುದ್ದಿ" ಎಂದು ಹೇಳಿದ್ದಾರೆ. 

ಪ್ರಸುತ್ತು ಶೀನಾ ಬೋರಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆ ಅನುಭವಿಸುತ್ತಿರುವ ಇಂದ್ರಾಣಿ ಮುಖರ್ಜಿಯನ್ನು ಇಂದು ಮುಂಬೈ ನ್ಯಾಯಾಲಯದಲ್ಲಿ ವಿಚಾರಣೆಗೆ ಕರೆ ತರುವ ವೇಳೆಯಲ್ಲಿ ಮಾದ್ಯಮಗಳೊಂದಿಗೆ ಚಿದಂಬರಂ ಬಂಧನದ ಬಗ್ಗೆ ಮಾತನಾಡಿದರು. ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಸಹ ಆರೋಪಿಯಾಗಿರುವ ಕಾರ್ತಿ ಚಿದಂಬರಂ ಅವರ ಜಾಮೀನು ಕೂಡ ತಿರಸ್ಕೃತವಾಗಲಿ ಎಂದು ಇಂದ್ರಾಣಿ ಇದೇ ವೇಳೆ ಹೇಳಿದ್ದಾರೆ.

ಇನ್ನು ಕಳೆದ ಫೆಬ್ರವರಿ 17, 2018ರಲ್ಲಿ ಇಂದ್ರಾಣಿ ಅಪ್ರೂವರ್ (ಪ್ರಮುಖ ಸಾಕ್ಷಿ) ಆಗಿ ಸಿಆರ್ ಪಿಸಿ ಸೆಕ್ಷನ್ 164 ಅನ್ವಯ ಮ್ಯಾಜಿಸ್ಟ್ರೇಟ್ ಮುಂದೆ ಕಾರ್ತಿ ಚಿದಂಬರಂ ಹಾಗೂ ಪಿ ಚಿದಂಬರಂ ವಿರುದ್ಧ ಹೇಳಿಕೆ ದಾಖಲಿಸಿದ್ದರಿಂದ ಪಿ ಚಿದಂಬರಂ ಬಂಧಿಸಲು ಸಾಧ್ಯವಾಗಿದೆ ಎನ್ನಲಾಗಿತ್ತು. ಇಂದ್ರಾಣಿ ನೀಡಿರುವ ಇ-ಮೇಲ್ ಸಾಕ್ಷಿ, ಹೋಟೆಲ್ ಹಯಾತ್ ನಲ್ಲಿ ಭೇಟಿ ಕುರಿತ ದಾಖಲೆ, ಚಿದಂಬರಂ ನೀಡಿದ ಸೂಚನೆ, ಮುಂತಾದ ಸಾಕ್ಷಿಗಳೇ ಸದ್ಯಕ್ಕೆ ಇಡಿ ಹಾಗೂ ಸಿಬಿಐಗೆ ಪ್ರಮುಖ ಅಸ್ತ್ರಗಳಾಗಿವೆ. ಇದೇ ಸಾಕ್ಷಿಯನ್ನು ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಈಗ ಸುಪ್ರೀಂಕೋರ್ಟ್ ಮುಂದೆ ವಾದ ಮಂಡಿಸಿವೆ.

SCROLL FOR NEXT