ದೇಶ

ಅವಳಿ ಮಕ್ಕಳ ಹುಟ್ಟುಹಬ್ಬ ಬದಿಗೊತ್ತಿ ಹೆಚ್ಐವಿ ಬಾಲಕನ ಚಿಕಿತ್ಸೆಗೆ ಸಹಾಯ ಹಸ್ತ ಚಾಚಿದ ವೈದ್ಯ!

Manjula VN

ಸಂಬಾಲ್ಪುರ: ಅದ್ದೂರಿ ಮದುವೆ, ಹುಟ್ಟುಹಬ್ಬ ಎಂದು ಮನಬಂದಂತೆ ಖರ್ಚು ಮಾಡುವವರಿಗೆ ಇಲ್ಲೊಬ್ಬ ವೈದ್ಯರು ಮಾದರಿಯಾಗಿದ್ದಾರೆ. ಅವಳಿ ಮಕ್ಕಳ ಹುಟ್ಟಹಬ್ಬವನ್ನು ಅದ್ದೂರಿಯಾಗಿ ಮಾಡಬೇಕೆಂದುಕೊಂಡಿದ್ದ ವೈದ್ಯರೊಬ್ಬರು, ಅದನ್ನು ಬದಿಗೊತ್ತಿ ಹೆಚ್ಐವಿ ಪೀಡಿತ ಬಾಲಕನೊಬ್ಬನಿಗೆ ಚಿಕಿತ್ಸೆ ನೀಡಿದ್ದಾರೆ. 

ಬುರ್ಲಾದ ವೀರ್ ಸುರೇಂದ್ರ ಸಾಯಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆ್ಯಂಡ್ ರಿಸರ್ಜ್ ನಲ್ಲಿ ವೈದ್ಯರಾಗಿರುವ ಶಂಕರ್ ರಾಮ್ ಚಂದಾನಿಯವರು ಇತರರಿಗೆ ಮಾದರಿಯಾಗಿದ್ದಾರೆ. 

ತಮ್ಮ ಅವಳಿ ಮಕ್ಕಳ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಶಂಕರ್ ಅವರು ನಿರ್ಧರಿಸಿದ್ದರು. ಆದರೆ, 12 ವರ್ಷದ ಬಾಲಕನೊಬ್ಬ ಹೆಚ್ಐವಿಯಿಂದ ಬಳಲುತ್ತಿರುವುದನ್ನು ನೋಡಿದ ಅವರು, ಹುಟ್ಟುಹಬ್ಬವನ್ನು ಬದಿಗೊತ್ತಿ, ರೂ.50,000ವನ್ನು ದಾನ ಮಾಡಿದ್ದಾರೆ. 

ಎರಡು ತಿಂಗಳ ಹಿಂದಷ್ಟೇ ಡಾ.ಶಂಕರ್ ಅವರಿಗೆ ಅವಳಿ ಮಕ್ಕಳು ಜನಿಸಿದ್ದವು. ಹೀಗಾಗಿ ಸಂಭ್ರಮವನ್ನಾಚರಿಸಲು ನಿರ್ಧರಿಸಿದ್ದರು. ಕಳೆದ ವಾರ ಬಾಲಕನೋರ್ವ ಹೆಚ್ಐವಿಯಿಂದ ಬಳಲುತ್ತಿರುವುದನ್ನು ಕಂಡ ವೈದ್ಯರು ಸಂಭ್ರಮಾಚರಣೆಯನ್ನು ನಿಲ್ಲಿಸಿ ಬಾಲಕನಿಗೆ ಧನ ಸಹಾಯ ಮಾಡಿದ್ದಾರೆ. 

ಬಾಲಕನ ತಂದೆ ಹಾಗೂ ತಾಯಿ ಇಬ್ಬರೂ ಏಡ್ಸ್ ನಿಂದ ಬಳಲುತ್ತಿದ್ದು, ಬಾಲಕ ಕೂಡ ಮಾರಕ ರೋಗದೊಂದಿಗೆ ಜನಿಸಿದ್ದಾನೆ. 2013ರಲ್ಲಿ ಬಾಲಕ ತನ್ನ ಪೋಷಕರನ್ನು ಕಳೆದುಕೊಂಡಿದ್ದ. ಇದಾದ ಬಳಿಕ ಚಿಕ್ಕಮ್ಮನ ಈತನನ್ನು ಸಲಹುತ್ತಿದ್ದರು. ಪ್ರಸ್ತುತ ಬಾಲಕ 7ನೇ ತರಗತಿಯದಲ್ಲಿ ವ್ಯಾಸಾಂಗ ಮಾಡುತ್ತಿದ್ದಾನೆ. ಮಾರಕ ರೋಗದಿಂದ ಬಳಲುತ್ತಿರುವ ಬಾಲಕ ತನ್ನ ಕೊನೆಯಾಸೆಯನ್ನು ವ್ಯಕ್ತಪಡಿಸಿದ್ದು, ತನ್ನ ಆರೋಗ್ಯ ಸರಿಹೋಗಬೇಕು, ಇಲ್ಲವೇ ತನ್ನನ್ನು ಸಾಕಿ ಸಲಹುತ್ತಿರುವ ಚಿಕ್ಕಮ್ಮನ ಆರ್ಥಿಕ ಸ್ಥಿತಿ ಸರಿಹೋಗಬೇಕೆಂದು ಬಯಸಿದ್ದಾನೆ. 

ಇದರಂತೆ ಎಂದಿನಂತೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಭೇಟಿ ನೀಡಿರುವ ಬಾಲಕನಿಗೆ ವೈದ್ಯ ಶಂಕರ್ ಅವರನ್ನು ಭೇಟಿ ಮಾಡಿದ್ದಾನೆ. ಈ ವೇಳೆ ಬಾಲಕ ತನ್ನ ಸಂಕಷ್ಟವನ್ನು ವೈದ್ಯರ ಬಳಿ ಹೇಳಿಕೊಂಡಿದ್ದಾನೆ. ಬಾಲಕನ ಅಳಲನ್ನು ಕೇಳಿದ ವೈದ್ಯ ಶಂಕರ್ ಅವರು, ಸಹಾಯಕ್ಕೆ ಮುಂದಾಗಿದ್ದಾರೆ. ಪ್ರಸ್ತುತ ಧನ ಸಹಾಯ ಮಾಡಿರುವ ಶಂಕರ್ ಅವರು, ಭವಿಷ್ಯದಲ್ಲಿ ಮತ್ತಷ್ಟು ಸಹಾಯ ಮಾಡುವ ಭರವಸೆಯನ್ನೂ ಬಾಲಕನಿಗೆ ನೀಡಿದ್ದಾರೆ. 

ಆರ್ಥಿಕ ನೆರವು ಸಿಗಲಿದೆ ಎಂದು ಎಂದಿಗೂ ಚಿಂತಿಸಿರಲಿಲ್ಲ. ಮುಂದಿನ ವಿದ್ಯಾಭ್ಯಾಸಕ್ಕೆ ಈ ಹಣ ನನಗೆ ಸಹಾಯಕವಾಗಲಿದೆ. ಈ ಹಣದಲ್ಲಿ ನನ್ನ ವಿದ್ಯಾಭ್ಯಾಸ ಪೂರ್ಣಗೊಳಿಸುತ್ತೇನೆಂದು ಬಾಲಕ ಸಂತಸ ವ್ಯಕ್ತಪಡಿಸಿದ್ದಾನೆ. 

ಹೆಚ್ಐವಿ ಪೀಡಿತರನ್ನು ಸಮಾಜದಲ್ಲಿ ನಿರ್ಲಕ್ಷ್ಯದಿಂದ ನೋಡಲಾಗುತ್ತಿದೆ. ಎಲ್ಲರಂತೆ ಜೀವನ ನಡೆಸುವ ಹಕ್ಕು ಅವರಿಗೂ ಇದೆ. ರೋಗದ ಆಧಾರದ ಮೇಲೆ ಸಮಾಜ ಅವರನ್ನು ತಾರತಮ್ಯದಿಂದ ನೋಡುತ್ತಿದೆ. ಇಂತಹವರಿಂದ ರೋಗ ಪೀಡಿತ ಮಕ್ಕಳ ಕನಸು ಛಿದ್ರಗೊಳ್ಳಬಾರದು ಎಂದು ವೈದ್ಯ ಶಂಕರ್ ತಿಳಿಸಿದ್ದಾರೆ. 

SCROLL FOR NEXT