ದೇಶ

ಪ್ರಜಾಪ್ರಭುತ್ವಕ್ಕೆ ಅವಮಾನ: ವಿಧಾನಸಭೆ ಗೇಟ್ ಮುಚ್ಚಿದ್ದಕ್ಕೆ ಪಶ್ಚಿಮ ಬಂಗಾಳ ರಾಜ್ಯಪಾಲರ ಆಕ್ರೋಶ

Lingaraj Badiger

ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭೆಗೆ ತಾವು ಆಗಮಿಸಿದಾಗ ಗೇಟ್ ಮುಚ್ಚಿರುವುದನ್ನು ಕಂಡು ರಾಜ್ಯಪಾಲ ಜಗದೀಶ್ ಧನ್ಕಾರ್ ಅವರು ಕೆಂಡಾಮಂಡಲವಾಗಿದ್ದು, ಇದು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ ಎಂದು ಗುರುವಾರ ಹೇಳಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಧನ್ಕಾರ್ ಅವರು, ನನ್ನ ಉದ್ದೇಶ ಐತಿಹಾಸಿಕ ಕಟ್ಟಡವನ್ನು ನೋಡುವುದು, ಗ್ರಂಥಾಲಯಕ್ಕೆ ಭೇಟಿ ನೀಡುವುದಾಗಿತ್ತು. ವಿಧಾನಸಭೆ ಅಧಿವೇಶನ ನಡೆಯುವಾಗ ಮಾತ್ರವಲ್ಲದೆ ವರ್ಷಪೂರ್ತಿ ತೆರೆದಿರಬೇಕು. ಆದರೆ ನಾನು ಬರುವುದು ಗೊತ್ತಿದ್ದರೂ ಬಂದ್ ಮಾಡಲಾಗಿದೆ. ಹೀಗೆ ಮಾಡುವುದರಿಂದ ನನಗೆ ಅವಮಾನವಾಗುತ್ತಿಲ್ಲ, ಬದಲಿಗೆ ಪ್ರಜಾಪ್ರಭುತ್ವವನ್ನು ಅವಮಾನಿಸಲಾಗುತ್ತಿದೆ ಎಂದರು.

ವಿಧಾನಸಭೆ ಅಧಿವೇಶನ ಮುಂದೂಡಿಕೆ ಅಂದರೆ ಪಶ್ಚಿಮ ಬಂಗಾಳದ ವಿಧಾನಸಭೆಯನ್ನು ಮುಚ್ಚಲಾಗಿದೆ ಎಂಬ ಅರ್ಥವಲ್ಲ ಎಂದು ಜಗದೀಪ್ ಧನ್ಕಾರ್ ಹೇಳಿದ್ದಾರೆ. 

ಸ್ಪೀಕರ್ ವಿಧಾನಸಭೆ ಅಧಿವೇಶನವನ್ನು ಎರಡು ದಿನ (ಬುಧವಾರ, ಗುರುವಾರ)  ಮುಂದೂಡಿದ್ದ ಬಳಿಕ ಇಂದು ಬೆಳಗ್ಗೆ ಮುಚ್ಚಲಾಗಿದ್ದ ಗೇಟ್​ ಬಳಿ ಕಾಯುತ್ತಿದ್ದ ಪತ್ರಕರ್ತರ ಬಳಿಗೆ ಬಂದ ರಾಜ್ಯಪಾಲರು, ವಿಧಾನಸಭೆಯ ಗೇಟ್​ಗಳನ್ನು ಏಕೆ ಮುಚ್ಚಲಾಗಿದೆ ಎಂದು ಪ್ರಶ್ನೆ ಮಾಡಿ, ಮುಂದೂಡಿಕೆ ಅಂದರೆ ವಿಧಾನಸಭೆಯನ್ನು ಮುಚ್ಚುವುದು ಎಂದು ಅರ್ಥವಲ್ಲ ಎಂದರು.

ಪಶ್ಚಿಮ ಬಂಗಾಳ ವಿಧಾನಸಭೆಯನ್ನು ಸ್ಪೀಕರ್ ಬಿಮನ್ ಬ್ಯಾನರ್ಜಿ ಅವರು ಎರಡು ದಿನಗಳವರೆಗೆ ಮುಂದೂಡಿದ್ದರು. ಸದನದಲ್ಲಿ ಕೆಲವು ಮಸೂದೆಗಳನ್ನು ಮಂಡಿಸಲು ಸಮಯ ನಿಗದಿಪಡಿಸಿದ್ದೇವೆ ಮತ್ತು ಅವುಗಳ ಮಂಡನೆಗೂ ಮುನ್ನ ಅವುಗಳನ್ನು ರಾಜ್ಯಪಾಲರ ಒಪ್ಪಿಗೆಗೆ ಕಳುಹಿಸಿದ್ದೇವೆ. ಮಸೂದೆಗಳು ಮುದ್ರಣಕ್ಕೂ ಕಳುಹಿಸಲಾಗಿತ್ತು. ಆದರೆ, ಅವರು ಅನುಮೋದನೆಗೆ ಅವುಗಳನ್ನು ಸ್ವೀಕರಿಸಿರಲಿಲ್ಲ. ಹೀಗಾಗಿ ಎರಡು ದಿನಗಳ ಮಟ್ಟಿಗೆ ವಿಧಾನಸಭೆಯನ್ನು ಮುಂದೂಡಿಕೆ ಮಾಡಲಾಯಿತು ಎಂದು ಹೇಳಿದ್ದರು.

SCROLL FOR NEXT