ದೇಶ

ಸುಡಾನ್ ದುರಂತ: ಆರು ಭಾರತೀಯರ ಮೃತ ದೇಹ ತರಲು ಪ್ರಯತ್ನ-ರವೀಶ್ ಕುಮಾರ್ 

Nagaraja AB

ನವದೆಹಲಿ: ಸುಡಾನ್ ಕಾರ್ಖಾನೆ ಸ್ಪೋಟದಲ್ಲಿ ಮೃತಪಟ್ಟ ಆರು ಭಾರತೀಯರ ಮೃತ ದೇಹ ಭಾರತಕ್ಕೆ ತರಲು ಪ್ರಯತ್ನ ಮಾಡಲಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ  ತಿಳಿಸಿದೆ.

ವಾರದ ಮಾಹಿತಿ ನೀಡುವ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವಾಲಯದ ವಕ್ತಾರ ರವೀಶ್ ಕುಮಾರ್, ಸುಡಾನ್ ನ ಈ ಕಾರ್ಖಾನೆಯಲ್ಲಿ 58 ಭಾರತೀಯರು ಕೆಲಸ ಮಾಡುತ್ತಿದ್ದು ದುರ್ಘಟನೆಯಲ್ಲಿ 6 ಮಂದಿ ಮೃತಪಟ್ಟಿದ್ದಾರೆ. ಎಂಟು ಭಾರತೀಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 11 ಜನರ ಗುರುತು ಪತ್ತೆಯಾಗಿಲ್ಲ ಎಂದರು, 33 ಭಾರತೀಯರು ಸುರಕ್ಷಿತವಾಗಿದ್ದಾರೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಮೃತರ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ. ಸ್ಥಳೀಯ ಸರ್ಕಾರದೊಂದಿಗೆ ನಮ್ಮ ಭಾರತೀಯ ರಾಯಭಾರಿ ಅಧಿಕಾರಿಗಳು ಸಹಕರಿಸುತ್ತಿದ್ದಾರೆ. ರಾಯಭಾರಿ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದು, ಆರು ಭಾರತೀಯರ ಮೃತ ದೇಹಗಳನ್ನು ಭಾರತಕ್ಕೆ ತರಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಇದಕ್ಕೂ ಮುನ್ನ 18 ಭಾರತೀಯರು ಸೇರಿದಂತೆ ಒಟ್ಟಾರೇ 23 ಮಂದಿ  ಕಾರ್ಖಾನೆಯಲ್ಲಿ ಸ್ಪೋಟದಲ್ಲಿ ಮೃತಪಟ್ಟಿರುವುದಾಗಿ ಸುಡಾನ್ ನಲ್ಲಿರುವ ಭಾರತೀಯ ರಾಯಬಾರಿ ಅಧಿಕಾರಿಗಳು ಹೇಳಿಕೆ ನೀಡಿದ್ದರು. ಆದಾಗ್ಯೂ, ಮೃತಪಟ್ಟವರ ಬಗ್ಗೆ  ಅಧಿಕೃತವಾಗಿ ದೃಢಪಡಿಸಿರಲಿಲ್ಲ. ಸೂಡಾನ್  ಅವಘಡ ಬಗ್ಗೆ ಪ್ರಧಾನಿ ನರೇಂದ್ರ ಮೋದಿ  ತೀವ್ರ ಸಂತಾಪ ವ್ಯಕ್ತಪಡಿಸಿದ್ದರು.

SCROLL FOR NEXT