ದೇಶ

ಉನ್ನಾವೋ: ಕಳೆದೊಂದು ವರ್ಷದಿಂದ ಅತ್ಯಾಚಾರ ಸಂತ್ರಸ್ತೆ ಕುಟುಂಬಕ್ಕೆ ಬೆದರಿಕೆ, ಆರೋಪಿಗಳಿಗೆ ಬಿಜೆಪಿ ನಂಟು-ಪ್ರಿಯಾಂಕಾ

Nagaraja AB

ಉನ್ನಾವೋ:  ಅತ್ಯಾಚಾರ ಸಂತ್ರಸ್ತೆ ಮೃತಪಟ್ಟ ನಂತರ ಉತ್ತರ ಪ್ರದೇಶದಲ್ಲಿನ ಉನ್ನಾವೋಗೆ ಇಂದು ಭೇಟಿ ನೀಡಿ, ಕುಟುಂಬ ಸದಸ್ಯರನ್ನು ಭೇಟಿ ಮಾಡಿದ  ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಅತ್ಯಾಚಾರ ಸಂತ್ರಸ್ತೆಗೆ ಬೆಂಕಿ ಹಚ್ಚಿ ಕೊಂದ ಕಿರಾತಕರಿಗೆ ಬಿಜೆಪಿ  ನಂಟಿದೆ ಎಂದು ಆರೋಪಿಸಿದರು. 

 ಆರೋಪಿಗಳಿಗೆ ಬಿಜೆಪಿ ಜೊತೆಗೆ ನಂಟಿರುವುದರಿಂದಲೇ  ಅವರನ್ನು ರಕ್ಷಿಸಲಾಗುತ್ತಿದೆ. ಇದಕ್ಕೂ ಮುಂಚೆನಿಂದಲೂ ಅಪರಾಧಿಗಳಿಗೆ ಇಲ್ಲಿ ಸರ್ಕಾರದಿಂದಲೇ ರಕ್ಷಣೆ ನೀಡುತ್ತಿರುವುದನ್ನು ನಾವು ನೋಡಿದ್ದೇವೆ. ಕಳೆದೊಂದು ವರ್ಷದಿಂದ ಸಂತ್ರಸ್ತೆ ಕುಟುಂಬಕ್ಕೆ ಬೆದರಿಕೆ ಹಾಕಲಾಗಿತ್ತು. ಆರೋಪಿಗಳು ಸಂತ್ರಸ್ತೆಯ ಮನೆಗೆ ಬಂದು ಅವರ ತಂದೆ ಮೇಲೆ ಹಲ್ಲೆ ನಡೆಸಿದ್ದರು. 10 ವರ್ಷದ ಬಾಲಕಿ ಮೇಲೆ ಹಲ್ಲೆ ನಡೆಸಲಾಗಿತ್ತು. ಜೂನ್ ತಿಂಗಳಲ್ಲಿ ಅವರ ಕೃಷಿ ಭೂಮಿಯನ್ನು ಹಾಳು ಮಾಡಲಾಗಿತ್ತು ಎಂದು ತಿಳಿಸಿದರು.

ಈ ಪ್ರಕರಣ ಸಂಬಂಧ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿದ ಪ್ರಿಯಾಂಕಾ ಗಾಂಧಿ, ರಾಜ್ಯದಲ್ಲಿ ಅಪರಾಧ ನಡೆಯುತ್ತಿಲ್ಲ ಎಂದು ಹೇಳುತ್ತಾರೆ. ಆದರೆ, ಅವರ ಆಡಳಿತದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಅಪರಾಧಿಗಳಿಗೆ ಯಾವುದೇ ಭಯವೇ ಇಲ್ಲ. ಈ ಅಪರಾಧಕ್ಕೆ ಸರ್ಕಾರ ಉತ್ತರ ನೀಡಬೇಕಾಗಿದೆ. ಕೂಡಲೇ ಕ್ರಮ ಕೈಗೊಳ್ಳುವ ಮೂಲಕ ಇಂತಹ ಅಪರಾಧಗಳು ಮರುಕಳಿಸದಂತೆ ಮಾಡಬೇಕಾಗಿದೆ ಎಂದು ಒತ್ತಾಯಿಸಿದರು.

ಆರೋಪಿಗಳು ಹಚ್ಚಿದ ಬೆಂಕಿಯಿಂದಾಗಿ ದೆಹಲಿಯ ಸಪ್ದರ್ ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉನ್ನಾವೋ ಅತ್ಯಾಚಾರ ಸಂತ್ರಸ್ತೆ ನಿನ್ನೆ ರಾತ್ರಿ ಮೃತಪಟ್ಟಿದ್ದಳು.

SCROLL FOR NEXT