ದೇಶ

ಉನ್ನಾವೋ ಅತ್ಯಾಚಾರ ಪ್ರಕರಣ: ಡಿ.16ಕ್ಕೆ ತೀರ್ಪು ಕಾಯ್ದಿರಿಸಿದ ದೆಹಲಿ ಕೋರ್ಟ್

Lingaraj Badiger

ನವದೆಹಲಿ: ಉತ್ತರ ಪ್ರದೇಶದ ಬಿಜೆಪಿ ಉಚ್ಛಾಟಿತ ಶಾಸಕ ಕುಲ್ದೀಪ್ ಸಿಂಗ್ ಸೆಂಗಾರ್ ವಿರುದ್ಧದ ಮಹಿಳೆಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು ಮಂಗಳವಾರ ಪೂರ್ಣಗೊಳಿಸಿದ ದೆಹಲಿ ಕೋರ್ಟ್, ತೀರ್ಪು ಕಾಯ್ದಿರಿಸಿದೆ.

ಉನ್ನಾವೋ ಅತ್ಯಾಚಾರ ಪ್ರಕರಣದ ವಿಚಾರಣೆ ಮುಕ್ತಾಯವಾಗಿದ್ದು, ಅಂತಿಮ ತೀರ್ಪನ್ನು ಡಿಸೆಂಬರ್ 16 ರಂದು ಪ್ರಕಟಿಸುವುದಾಗಿ ದೆಹಲಿ ಜಿಲ್ಲಾ ನ್ಯಾಯಾಧೀಶ ಧರ್ಮೇಶ್​ ಶರ್ಮಾ ತಿಳಿಸಿದ್ದಾರೆ.

2017 ರಲ್ಲಿ ಉನ್ನಾವೋದಲ್ಲಿ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ್ದ ಬಿಜೆಪಿ ಶಾಸಕ ಕುಲ್ದೀಪ್ ಸಿಂಗ್ ಅತ್ಯಾಚಾರವೆಸಗಿದ್ದ. ಪ್ರಕರಣದಿಂದ ತಪ್ಪಿಸಿಕೊಳ್ಳಲು ಪ್ರಮುಖ ಸಾಕ್ಷಿಗಳನ್ನು ಮುಗಿಸಲು ಲಾರಿ ಮೂಲಕ ಅಪಘಾತ ನಡೆಸಿದ್ದ. ಘಟನೆಯಲ್ಲಿ ಅತ್ಯಾಚಾರಕ್ಕೊಳಗಾಗಿದ್ದ ಸಂತ್ರಸ್ತೆ ಬಚಾವಾಗಿ ತನ್ನ ಇಬ್ಬರು ಚಿಕ್ಕಮ್ಮಂದಿರನ್ನು ಕಳೆದುಕೊಂಡಿದ್ದರು.

ದೇಶವನ್ನೇ ಬೆಚ್ಚಿಬೀಳಿಸಿದ್ದ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. ಪ್ರಕರಣ ಪ್ರಮುಖ ಸಾಕ್ಷಿಗಳ ಹೇಳಿಕೆಗಳನ್ನು ಡಿಸೆಂಬರ್ 2 ರಂದು ಸಂಗ್ರಹಿಸಿರುವ ಸಿಬಿಐ, ಸೋಮವಾರ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಎಲ್ಲವನ್ನೂ ಪರಿಶೀಲಿಸಿದ ನ್ಯಾಯಾಲಯ ಅಂತಿಮ ತೀರ್ಪನ್ನು ಕಾಯ್ದಿರಿಸಿದೆ.

SCROLL FOR NEXT