ದೇಶ

ಡೀಮಾನೆಟೈಸೇಶನ್ ನಿಂದ ಚಲಾವಣೆಯಲ್ಲಿರುವ ಕರೆನ್ಸಿ ನೋಟುಗಳ ಬೆಳವಣಿಗೆ ಕುಂಠಿತ!

Nagaraja AB

ನವ ದೆಹಲಿ: ನೋಟು ಅಮಾನ್ಯೀಕರಣದಿಂದ ಚಲಾವಣೆಯಲ್ಲಿರುವ ಕರೆನ್ಸಿ ನೋಟುಗಳ ಬೆಳವಣಿಗೆ ಕುಂಠಿತವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. 

ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಲಿಖಿತ ಉತ್ತರ ನೀಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ನವೆಂಬರ್ 4, 2016 ರಲ್ಲಿ 17,74,187 ಕೋಟಿ ರೂ. ಕರೆನ್ಸಿ ನೋಟುಗಳ ಚಲಾವಣೆಯಾಗಿತ್ತು. ಅದು ಡಿಸೆಂಬರ್ 2 , 2019 ವೇಳೆಗೆ  22,35,648 ಕೋಟಿ ರೂ.ಗೆ ಹೆಚ್ಚಳವಾಗಿದೆ. 

ಅಕ್ಟೋಬರ್ 2014ರಿಂದ ಅಕ್ಟೋಬರ್ 2016ರವರೆಗೂ ವರ್ಷಕ್ಕೆ ಸರಾಸರಿ ಶೇ. 14. 51ರಲ್ಲಿ  ನೋಟುಗಳ ಬೆಳವಣಿಗೆ ಹೆಚ್ಚಾಗಿದ್ದು, ಡಿಸೆಂಬರ್ 2ರ ವೇಳೆಗೆ 25, 40, 253 ಕೋಟಿ ರೂ. ಗೆ. ಏರಿಕೆ ಆಗಿದೆ. ನೋಟು ಅಮಾನ್ಯೀಕರಣ ನಂತರ 3, 04, 605 ಕೋಟಿಯಷ್ಟು ನೋಟುಗಳ ಚಲಾವಣೆ ಕಡಿಮೆಯಾಗಿದೆ ಎಂದು ಸಚಿವರು ಹೇಳಿದರು. 

ನಗದು ರಹಿತ ಆರ್ಥಿಕತೆ ಹಾಗೂ  ಡಿಜಿಟಲೀಕರಣ 3,060,605 ಕೋಟಿ ರೂ.ಗಳಷ್ಟು ಕರೆನ್ಸಿ ನೋಟುಗಳ ಚಲಾವಣೆಯನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದೆ" ಎಂದು ಸಚಿವರು ಹೇಳಿದರು.

ನಕಲಿ ನೋಟು, ಕಪ್ಪು ಹಣ ತಡೆಗಟ್ಟುವ ನಿಟ್ಟಿನಲ್ಲಿ  ನವೆಂಬರ್ 8, 2016ರಲ್ಲಿ ಸರ್ಕಾರ 1 ಸಾವಿರ ಹಾಗೂ 500 ರೂ. ಮೌಲ್ಯದ ನೋಟುಗಳನ್ನು ಸರ್ಕಾರ ನಿಷೇಧಿಸಿತ್ತು.

2016-17ರಲ್ಲಿ 7, 62, 072 ರೂ, 2017-18ರಲ್ಲಿ 5, 22, 783 ಹಾಗೂ 2018-19ರಲ್ಲಿ 3, 17,389 ರೂ. ನಕಲಿ ನೋಟುಗಳು ಪತ್ತೆಯಾಗಿವೆ ಎಂದು ಆರ್ ಬಿಐ ತಿಳಿಸಿರುವುದಾಗಿ ನಿರ್ಮಲಾ ಸೀತಾರಾಮನ್ ಸದನಕ್ಕೆ ಮಾಹಿತಿ ನೀಡಿದರು. 

ನೋಟು ಅಮಾನ್ಯೀಕರಣದಿಂದ ನಕಲಿ ನೋಟುಗಳ ತಡೆಗಟ್ಟುವುದರ ಜೊತೆಗೆ ಕಳೆದ ಕೆಲ ವರ್ಷಗಳಲ್ಲಿ ಡಿಜಿಟಲ್ ವ್ಯವಹಾರ ಹೆಚ್ಚಳವಾಗಿರುವುದಾಗಿ ನಿರ್ಮಲಾ ಸೀತಾರಾಮನ್ ತಿಳಿಸಿದರು.

SCROLL FOR NEXT