ದೇಶ

ನಾವು ಭಾರತೀಯರು: ಪೌರತ್ವ ತಿದ್ದುಪಡಿ ಮಸೂದೆ ಸ್ವಾಗತಿಸಿದ ಆಫ್ಘಾನ್ ಸಿಖ್ ಕುಟುಂಬ

Manjula VN

ಲುಧಿಯಾನ: ಧಾರ್ಮಿಕ ಸಂಘರ್ಷದ ವೇಳೆ ಆಫ್ಘಾನಿಸ್ತಾನದಿಂದ ಭಾರತಕ್ಕೆ ಬಂದ ಸಿಖ್ ಕುಟುಂಬ ಕೇಂದ್ರ ಸರ್ಕಾರ ತಿದ್ದುಪಡಿ ತಂದಿರುವ ಪೌರತ್ವ ಮಸೂದೆಯನ್ನು ಸ್ವಾಗತಿಸಿದೆ. 

ಪೌರತ್ವ ಮಸೂದೆಗೆ ಲೋಕಸಭೆಯಲ್ಲಿ ಅನುಮೋದನೆ ಸಿಕ್ಕಿರುವುದು ಬಹಳ ಸಂತೋಷ ತಂದಿದೆ. ರಾಜ್ಯಸಭೆಯಲ್ಲೂ ಮಸೂದೆ ಅಂಗೀಕಾರ ಸಿಗುವ ವಿಶ್ವಾಸವಿದೆ. ಭಾರತೀಯ ಪೌರತ್ವ ಪಡೆಯಲು ನಮಗೆ ಮಸೂದೆ ಸಹಾಯ ಮಾಡುತ್ತದೆ ಎಂದು ಸಿಖ್ ಕುಟುಂಬಸ್ಥರು ಹೇಳಿದ್ದಾರೆ. 

2012ರಲ್ಲಿ ಆಫ್ಘಾನಿಸ್ತಾನದಿಂದ ನಾವು ಭಾರತಕ್ಕೆ ಬಂದಿದ್ದೆವು. ಕಾಬುಲ್'ನ ಶೋರ್ ಬಜಾರ್ ನಲ್ಲಿದ್ದೆವು. ಈ ವೇಳೆ ನಮ್ಮ ಧರ್ಮಕ್ಕನುಗುಣವಾಗಿ ಕುಟುಂಬಸ್ಥರ ಅಂತ್ಯ ಸಂಸ್ಕಾರಕ್ಕೆ ನಮಗೆ ಅಲ್ಲಿ ಅವಕಾಶ ನೀಡುತ್ತಿರಲಿಲ್ಲ. ಇದು ನಮಗೆ ಮುಜುಗರವನ್ನು ತರಿಸುತ್ತಿತ್ತು. ನಮ್ಮ ಮೇಲೆ ಸಾಕಷ್ಟು ದೌರ್ಜನ್ಯ ಎಸಗಲಾಗುತ್ತಿತ್ತು. ಭಾರತದಲ್ಲಿರುವುದಕ್ಕೆ ನಮಗೆ ಸಂತೋಷವಿದೆ. ಲೋಕಸಭೆಯಲ್ಲಿ ಮಸೂದೆ ಅನುಮೋದನೆ ಪಡೆದುಕೊಂಡಿರುವುದು ಬಹಳ ಸಂತೋಷವನ್ನು ತಂದಿದೆ. ಶೀಘ್ರದಲ್ಲಿಯೇ ನಾವೂ ಭಾರತೀಯ ಪೌರತ್ವವನ್ನು ಪಡೆದುಕೊಳ್ಳಲಿದ್ದೇವೆ. ಇದಕ್ಕೆ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇವೆಂದು ಆಫ್ಘಾನಿಸ್ತಾನ ವಲಸಿಗ ಶಮಿ ಸಿಂಗ್ ಹೇಳಿದ್ದಾರೆ. 

ಇದೇ ವೇಳೆ ವಿರೋಧ ಪಕ್ಷಗಳು ಮಸೂದೆಗೆ ವಿರೋಧ ವ್ಯಕ್ತಪಡಿಸುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಆಫ್ಘಾನಿಸ್ತಾನದಿಂದ ನಾವು ಬಂದಿದ್ದೇವೆ. ನಾವು ಭಾರತೀಯರೆಂದೇ ನಂಬಿದ್ದೇವೆ. ಮಸೂದೆಗೆ ನೀವು ವಿರೋಧಿಸಿದರೆ, ನಾವೆಲ್ಲಿ ಹೋಗಬೇಕು ಎಂದು ಪ್ರಶ್ನಿಸಿದ್ದಾರೆ. 

SCROLL FOR NEXT