ದೇಶ

ಪೌರತ್ವ ತಿದ್ದುಪಡಿ ವಿರೋಧಿಸುವ ಹಕ್ಕು ರಾಜ್ಯಸರ್ಕಾರಗಳಿಗೆ ಇಲ್ಲ: ಗೃಹ ಸಚಿವಾಲಯ

Srinivasamurthy VN

ನವದೆಹಲಿ: ತೀವ್ರ ವಿವಾದಕ್ಕೆ ಕಾರಣವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಹಲವು ರಾಜ್ಯಗಳು ವಿರೋಧ ವ್ಯಕ್ತಪಡಿಸಿರುವಂತೆಯೇ ಇದಕ್ಕೆ ತಿರುಗೇಟು ನೀಡಿರುವ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ವಿರೋಧಿಸುವ ಹಕ್ಕು ರಾಜ್ಯಸರ್ಕಾರಗಳಿಗೆ ಇಲ್ಲ ಎಂದು ಹೇಳಿದೆ.

ಈ ಕುರಿತಂತೆ ಕೇಂದ್ರ ಗೃಹ ಸಚಿವಾಲಯ ಮಾಹಿತಿ ನೀಡಿದ್ದು, ರಾಜ್ಯ ಸರ್ಕಾರಗಳು ಈ ಕಾಯ್ದೆಯನ್ನು ಜಾರಿಗೊಳಿಸಲು ನಿರಾಕರಿಸುವಂತಿಲ್ಲ ಎಂದು ಹೇಳಲಾಗಿದೆ. 'ರಾಜ್ಯಗಳು ಈ ಕಾನೂನನ್ನು ಜಾರಿಗೊಳಿಸುವುದರಿಂದ ಹಿಂದೆ ಸರೆಯುವ ಪ್ರಶ್ನೆಯೇ ಇಲ್ಲ. ರಾಜ್ಯ ಸರ್ಕಾರಗಳಿಗೆ ಅಂತಹ ಯಾವುದೇ ಅಧಿಕಾರವಿಲ್ಲ ಎಂದು  ಹೇಳಿದೆ.

ಅಂತೆಯೇ ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಂವಿಧಾನ ತಜ್ಞರು, ರಾಜ್ಯಗಳಿಗೆ ಅಥವಾ ರಾಜ್ಯಸರ್ಕಾರಗಳಿಗೆ ಸಿಎಬಿಗೆ ಸಂಬಂಧಿಸಿದಂತೆ ನಿರ್ಣಾಯಕ ಪಾತ್ರವಿಲ್ಲ. ಪಂಜಾಬ್,  ಕೇರಳ ಮತ್ತು ಪಶ್ಚಿಮ ಬಂಗಾಳ ಸಿಎಂಗಳು ತೆಗೆದುಕೊಂಡಿರುವ ನಿರ್ಧಾರಗಳಿಗೆ ಕಾನೂನಾತ್ಮಕವಾಗಿ ಮಾನ್ಯತೆ ಇಲ್ಲ ಎಂದು ಹೇಳಿದ್ದಾರೆ.

ಇನ್ನು ಈ ವಿವಾದಿತ ಕಾಯ್ದೆಯನ್ನು ಪ್ರಶ್ನಿಸಿ ಕಾಂಗ್ರೆಸ್ ಪಕ್ಷ ಸುಪ್ರೀಂ ಕೋರ್ಟ್ ಮೊರೆಹೋಗಿದೆ. ಈ ಕಾನೂನು ಸಮಾನತೆಯ ಅಧಿಕಾರವನ್ನು ಮೊಟಕುಗೊಳಿಸಲಿದೆ ಎಂದು ಪಕ್ಷ ತನ್ನ ಅರ್ಜಿಯಲ್ಲಿ ವಾದಿಸಿದೆ.

SCROLL FOR NEXT