ದೇಶ

ಕೊಲ್ಕತ್ತಾ: ಪೌರತ್ವ ಕಾಯ್ದೆ, ಎನ್ ಆರ್ ಸಿ ಹಿಂಪಡೆಯುವವರೆಗೂ ಪ್ರತಿಭಟನೆ, ಮೆಗಾ ರ‍್ಯಾಲಿಯಲ್ಲಿ ಮಮತಾ

Nagaraja AB

ಕೊಲ್ಕತ್ತಾ:  ಪೌರತ್ವ ( ತಿದ್ದುಪಡಿ ) ಕಾಯ್ದೆ ಹಾಗೂ ದೇಶಾದ್ಯಂತ ಎನ್ ಆರ್ ಸಿ ಅನುಷ್ಠಾನ ಪ್ರಸ್ತಾವವನ್ನು ವಿರೋಧಿಸಿ ಸಹಸ್ರಾರು ಟಿಎಂಸಿ ಕಾರ್ಯಕರ್ತರೊಂದಿಗೆ ಇಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಕೊಲ್ಕತ್ತಾದ ಬೀದಿಗಳಲ್ಲಿ ಮೆಗಾ ರ‍್ಯಾಲಿ ನಡೆಸಲಾಯಿತು.

ನಗರದ ಹೃದಯ ಭಾಗ ಕೆಂಪು ರಸ್ತೆಯಿಂದ ಆರಂಭವಾದ  ರ‍್ಯಾಲಿ ಸುಮಾರು 4 ಕಿಲೋ ಮೀಟರ್ ದೂರ ಸಾಗಿ ನೊಬೆಲ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ರವೀಂದ್ರನಾಥ್ ಠಾಗೂರ್ ಅವರ ನಿವಾಸ ಜೋರಸಖೋ ಠಾಕೂರ್ ಬ್ಯಾರಿ ಬಳಿ ಸಮಾವೇಶಗೊಂಡಿತು.

ಪಶ್ಚಿಮ ಬಂಗಾಳದಲ್ಲಿ ಪೌರತ್ವ ( ತಿದ್ದುಪಡಿ ) ಕಾಯ್ದೆ ಹಾಗೂ ಎನ್ ಆರ್ ಸಿ ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಕ್ಷದ ಕಾರ್ಯಕರ್ತರಿಗೆ ಅವರು ಇದೇ ಸಂದರ್ಭದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿದರು. 

ಸತತ ನಾಲ್ಕನೇ ದಿನವಾದ ಇಂದೂ ಕೂಡಾ ಪಶ್ಚಿಮ ಬಂಗಾಳದ ವಿವಿಧ ಕಡೆಗಳಲ್ಲಿ ರಸ್ತೆ, ರೈಲು ತಡೆಗಳು ಆದಂತಹ ಬಗ್ಗೆ ವರದಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಪಶ್ಚಿಮ ಮಿಡ್ನಾಪುರ, ಮುರ್ಷಿದಾಬಾದ್, ಮಾಲ್ಡಾ, ನಾಡಿಯಾ ಮತ್ತು ಉತ್ತರ 24 ಪರಗಣ ಜಿಲ್ಲೆಗಳಲ್ಲಿ ಪ್ರತಿಭಟನಾಕಾರರು ರಸ್ತೆ ನಡೆಸಿದ್ದರಿಂದ ನೂರಾರು ಪ್ರಯಾಣಿಕರಿಗೆ ತೊಂದರೆಯಾಗಿದೆ ಎಂದು ಅವರು ಹೇಳಿದ್ದಾರೆ. 

ಮಾಲ್ಡಾ ಜಿಲ್ಲೆಯ ಶಾಂಸಿ ರೈಲ್ವೆ ನಿಲ್ದಾಣದ ಹೊರಗಡೆ  ಜಮಾಯಿಸಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಅನೇಕ ಎಕ್ಸ್ ಪ್ರೆಸ್ ಹಾಗೂ ಸ್ಥಳೀಯ ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ. 

ಸೀಲ್ಡಾ-ಡೈಮಂಡ್ ಹಾರ್ಬರ್ ಮತ್ತು ಸೀಲ್ಡಾ- ನಾಮ್ಖಾನಾ ವಲಯಗಳ ಹಳಿಗಳ ಮೇಲೆ ಪ್ರತಿಭಟನಾಕರರು ಮಲಗಿ ಪ್ರತಿಭಟನೆ ನಡೆಸಿದ್ದಾರೆ. ಅವರನ್ನು ಚದುರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ರೈಲ್ವೆ ವಕ್ತಾರರು ತಿಳಿಸಿದ್ದಾರೆ. 

ಈ ಮಧ್ಯೆ ಜಾಮೀಯಾ ಮಿಲಿಯಾ ವಿದ್ಯಾರ್ಥಿಗಳ  ಪ್ರತಿಭಟನೆಗೆ ಜಾದವಪುರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ಪೊಲೀಸರ ಕ್ರಮವನ್ನು ಖಂಡಿಸಿದ್ದಾರೆ.

ಮಾಲ್ಡಾ, ಉತ್ತರ ದಿನಾಜ್ ಪುರ, ಮುರ್ಷಿದಾಬಾದ್, ಹೌರಾ, ಉತ್ತರ 24 ಪರಗಣ ಹಾಗೂ ದಕ್ಷಿಣ 24 ಪರಗಣ ಜಿಲ್ಲೆಗಳಲ್ಲಿ ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ನಾಡಿಯಾ, ಬಿರೂಭೂಮ್ ಜಿಲ್ಲೆಗಳಲ್ಲಿ ಹಿಂಸಾಚಾರ, ಲೂಟಿಯಂತಹ ಘಟನೆಗಳಾಗಿರುವ ಬಗ್ಗೆ ವರದಿಯಾಗಿದೆ. 

SCROLL FOR NEXT