ದೇಶ

ಆಂಧ್ರ ಪ್ರದೇಶಕ್ಕೆ ಮೂರು ರಾಜಧಾನಿಗಳು: ಸಿಎಂ ಜಗನ್ ಮೋಹನ್ ರೆಡ್ಡಿ

Lingaraj Badiger

ಅಮರಾವತಿ: ವಿಕೇಂದ್ರೀಕರಣದ ನಿಜವಾದ ಪರಿಕಲ್ಪನೆಯ ಭಾಗವಾಗಿ ಆಂಧ್ರ ಪ್ರದೇಶ ಶೀಘ್ರದಲ್ಲೇ ಮೂರು ರಾಜಧಾನಿಗಳನ್ನು ಹೊಂದಲಿದೆ ಎಂಬ ಸುಳಿವನ್ನು ಸ್ವತಃ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ನೀಡಿದ್ದಾರೆ.

ಇಂದು ವಿಧಾನಸಭೆಯಲ್ಲಿ ರಾಜಧಾನಿ ಅಮರಾವತಿ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ, ಈಗ ರಾಜಧಾನಿಯಾಗಿರುವ ಅಮರಾವತಿಯನ್ನು ಶಾಸಕಾಂಗ ರಾಜಧಾನಿಯಾಗಿ, ಬಂದರು ನಗರಿ ವಿಶಾಖಪಟ್ಟಣಂ ಅನ್ನು ಆಡಳಿತಾತ್ಮಕ ರಾಜಧಾನಿಯಾಗಿ ಹಾಗೂ ಕರ್ನೂಲ್ ಅನ್ನು ನ್ಯಾಯಾಂಗ ರಾಜಧಾನಿಯಾಗಿ ನಿರ್ಮಿಸುವ ಚಿಂತನೆ ಇದೆ ಎಂದರು.

ನಾವು ರಾಜ್ಯದಲ್ಲಿ ಮೂರು ವಿಭಿನ್ನ ರಾಜಧಾನಿಗಳನ್ನು ಹೊಂದುವ ಅಗತ್ಯ ಇದ್ದು, ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಆದರೆ ಈ ಕುರಿತು ಅಧ್ಯಯನ ನಡೆಸಲು ತಜ್ಞರ ಸಮಿತಿ ರಚಿಸಲಾಗುವುದು ಮತ್ತು ಆ ಸಮಿತಿ ನೀಡುವ ವರದಿ ಆಧಾರದ ಮೇಲೆ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಹೇಳಿದ್ದಾರೆ.

ರಾಜ್ಯದಲ್ಲಿ ಮೂರು ರಾಜಧಾನಿಗಳನ್ನು ಹೊಂದುವ ಕುರಿತು ಕೆಲವೇ ದಿನಗಳಲ್ಲಿ ತಜ್ಞರ ಸಮಿತಿ ವರದಿ ನೀಡಲಿದೆ ಎಂದು ಜಗನ್ ತಿಳಿಸಿದ್ದಾರೆ.

ವಿಶಾಖಪಟ್ಟಣಂ ಮೆಟ್ರೊ ಹೊರತುಪಡಿಸಿ ಇತರೆ ಎಲ್ಲಾ ಸೌಲಭ್ಯಗಳನ್ನು ಹೊಂದಿದ್ದು, ಅಲ್ಲಿಗೆ ಸಚಿವಾಲಯ ಹಾಗೂ ಇತರೆ ಇಲಾಖೆಗಳ ಮುಖ್ಯ ಕಚೇರಿಗಳನ್ನು ಸ್ಥಳಾಂತರಿಸುವ ಬಗ್ಗೆ ಸಿಎಂ ಸುಳಿವು ನೀಡಿದ್ದಾರೆ.

ಅಮರಾವತಿಯನ್ನು ಪೂರ್ಣಪ್ರಮಾಣದ ರಾಜಧಾನಿಯಾಗಿ ಮಾಡಲು ಕನಿಷ್ಠ 1 ಲಕ್ಷ ಕೋಟಿ ರೂಪಾಯಿ ಬೇಕು. ಆದರೆ ಇಷ್ಟೊಂದು ಹಣ ಎಲ್ಲಿಂದ ಬರುತ್ತದೆ ಎಂದು ಸಿಎಂ ಅಚ್ಚರಿ ವ್ಯಕ್ತಪಡಿಸಿದ್ದಾರೆ.

SCROLL FOR NEXT