ದೇಶ

ಕಳಸಾ ಬಂಡೂರಿ: ಕರ್ನಾಟಕಕ್ಕೆ ನೀಡಿದ್ದ ಅನುಮತಿ ತಡೆ ಹಿಡಿದ ಕೇಂದ್ರ ಸರ್ಕಾರ

Sumana Upadhyaya

ಪಣಜಿ: ಕರ್ನಾಟಕ ರಾಜ್ಯದ ಕಳಸಾ –ಬಂಡೂರಿ ಯೋಜನೆಗೆ ಅನುಮತಿ ನೀಡಿದ್ದ ಪತ್ರವನ್ನು ಪರಿಸರ ಮತ್ತು ಅರಣ್ಯ ಸಚಿವಾಲಯ ತಡೆಹಿಡಿದಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ. 


 ಈ ಕುರಿತು ಬುಧವಾರ ಟ್ವೀಟ್ ಮಾಡಿರುವ ಅವರು “ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ಸಚಿವಾಲಯ ಕರ್ನಾಟಕದ ಕಳಸಾ ಬಂಡೂರು ಕುಡಿಯುವ ನೀರು ಪೂರೈಕೆ ಯೋಜನೆಗೆ ಅನುಮತಿ ನೀಡಿ 2019ರ ಅಕ್ಟೋಬರ್ 17ರಂದು ನೀಡಿದ್ದ ಪತ್ರವನ್ನು ಸಂಬಂಧಿಸಿದ ಎಲ್ಲಾ ಕಾನೂನು ವ್ಯಾಜ್ಯಗಳು ಇತ್ಯರ್ಥವಾಗುವರೆಗೆ ತಡೆಹಿಡಿದಿರುವುದಾಗಿ ಮಾಹಿತಿ ನೀಡಿದೆ” ಎಂದಿದ್ದಾರೆ. 


ಈ ಸಂಬಂಧ ಪರಿಸರ ಮತ್ತು ಅರಣ್ಯ ಸಚಿವಾಲಯ ಮತ್ತು ಕರ್ನಾಟಕ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ನಡುವಿನ ಸಂವಹನದ ಪತ್ರವನ್ನು ಸಾವಂತ್ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. 


ಈ ಹಿಂದೆ ಕಳಸಾ ಬಂಡೂರಿ ಯೋಜನೆಗೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಗೋವಾ ವಿಪಕ್ಷಗಳು ಭಾರಿ ಪ್ರತಿಭಟನೆ ನಡೆಸಿದ್ದರು. ನಂತರ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದ ನಿಯೋಗ ಪರಿಸರ ಮತ್ತು ಅರಣ್ಯ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರನ್ನು ಭೇಟಿ ಮಾಡಿ ಅನುಮತಿ ಹಿಂಪಡೆಯುವಂತೆ ಮನವಿ ಮಾಡಿದ್ದರು. ಈ ಸಂಬಂಧ ಹತ್ತು ದಿನಗಳಲ್ಲಿ  ಕ್ರಮ ಕೈಗೊಳ್ಳುವುದಾಗಿ ಜಾವಡೇಕರ್ ಭರವಸೆ ನೀಡಿದ್ದರು. ಈ ಸಂಬಂಧ ಪರಿಶೀಲಿಸಲು ಪ್ರತ್ಯೇಕ ಸಮಿತಿಯನ್ನೂ ರಚಿಸಿದ್ದರು. 


 ಡಿಸೆಂಬರ್ 15ರಂದು ಗೋವಾದ ಕಾಂಗ್ರೆಸ್ ಘಟಕ ನವದೆಹಲಿಯಲ್ಲಿ ಪ್ರತಿಭಟನೆ ನಡೆಸಿ ಪ್ರದಾನಿ ನರೇಂದ್ರ ಮೋದಿ ಅವರಿಗೆ ಅನುಮತಿ ಹಿಂಪಡೆಯುವಂತೆ ಮನವಿ ಸಲ್ಲಿಸಿದ್ದರು. 


ಮಹದಾಯಿ ನದಿಯಿಂದ ಮಲಪ್ರಭಾ ನದಿಗೆ ನೀರು ಹರಿಸುವ ಕಳಸಾ ಬಂಡೂರಿ ಯೋಜನೆಗೆ ಗೋವಾ ಸರ್ಕಾರ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಿದೆ. ನೀರಿನ ಹರಿವು ಬದಲಾವಣೆಯಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎಂದು ಅದು ವಾದಿಸುತ್ತಿದೆ.

SCROLL FOR NEXT